ಸಿಂಗಪುರ: ಅಪಾರ್ಟ್‌ಮೆಂಟ್ ಬಳಿ ಪಾರಿವಾಳಗಳಿಗೆ ಕಾಳು ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರತೀಯ ಮೂಲದ ಮಹಿಳೆಯೊಬ್ಬರಿಗೆ ₹79,800 (1,200 ಸಿಂಗಪುರ ಡಾಲರ್) ದಂಡ ವಿಧಿಸಲಾಗಿದೆ.
ಬುಧವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯವು ಆದೇಶ ನೀಡಿದೆ.
ಅಪಾರ್ಟ್‌ಮೆಂಟ್ ಬಳಿ ಪಾರಿವಾಳಗಳಿಗೆ ಕಾಳು ಹಾಕುವಾಗ ರಾಷ್ಟ್ರೀಯ ಉದ್ಯಾನ ಮಂಡಳಿಯ ಅಧಿಕಾರಿಗಳು, ಈ ರೀತಿ ಮಾಡುವುದು ಅಪರಾಧ ಎಂದು ಸೂಚನೆ ನೀಡಿದ್ದಾರೆ. ಘಟನೆಯು ಪುನರಾವರ್ತನೆಯಾದಾಗ ಭಾರತೀಯ ಮೂಲದ 70 ವರ್ಷದ ಮಹಿಳೆ ಸನ್ಮುಗಮನಾಥನ್ ಶಾಮಲ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಸಿಂಗಪುರದ ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿ ನಿರ್ವಹಣಾಧಿಕಾರಿಯ ಲಿಖಿತ ಅನುಮತಿಯಿಲ್ಲದೇ ಸಾಮಾನ್ಯ ಜನರು ವನ್ಯ ಜೀವಿಗಳಿಗೆ ಆಹಾರ ನೀಡುವುದು ಅಪರಾಧವಾಗಿದೆ.
ರಾಷ್ಟ್ರೀಯ ಉದ್ಯಾನ ಮಂಡಳಿಯು ಪಾರಿವಾಳಗಳನ್ನು ಸೆರೆ ಹಿಡಿಯುವಾಗ ಅವರಿಗೆ ಅಡ್ಡಿಪಡಿಸಿದ ಆರೋಪ ಕೂಡ ಈ ಮಹಿಳೆಯ ಮೇಲಿತ್ತು.
ನ್ಯಾಯಲಯವು 2 ದಿನಗಳ ನ್ಯಾಯಾಂಗ ಬಂಧನ ಅಥವಾ 1,200 ಸಿಂಗಪುರ ಡಾಲರ್ ದಂಡ ವಿಧಿಸಿತ್ತು. ವಯೋಸಹಜ ಖಾಯಿಲೆಯ ಕಾರಣದಿಂದ ನ್ಯಾಯಾಂಗ ಬಂಧನ ಸಾಧ್ಯವಿಲ್ಲವೆಂದು, ದಂಡ ಪಾವತಿಸಲು ಶಾಮಲ ಒಪ್ಪಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.