ADVERTISEMENT

ಇಥಿಯೋಪಿಯಾ ಪ್ರಧಾನಿಗೆ ನೊಬೆಲ್‌ ಶಾಂತಿ ಪುರಸ್ಕಾರ

ಏಜೆನ್ಸೀಸ್
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
ಅಬಿ ಅಹಮದ್‌
ಅಬಿ ಅಹಮದ್‌   

ಒಸ್ಲೊ: ಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್‌(43 ವರ್ಷ) ಅವರು 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಎರಿಟ್ರಿಯಾ ಜೊತೆಗೆ ದೇಶ ಸುದೀರ್ಘ ಕಾಲದಿಂದ ಹೊಂದಿದ್ದ ಗಡಿ ಬಿಕ್ಕಟ್ಟನ್ನು ಯಶಸ್ವಿಯಾಗಿ ಬಗೆಹರಿಸಿ ಶಾಂತಿ ನೆಲೆಸಲು ಕೈಗೊಂಡ ಕ್ರಮಗಳಿಗಾಗಿ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಲಾಗಿದೆ.

ನೊಬೆಲ್‌ ಶಾಂತಿ ಪ್ರಶಸ್ತಿಯು ₹6.51ಕೋಟಿ ನಗದು,ಚಿನ್ನದ ಪದಕ, ಪಾರಿ ತೋಷಕ ಒಳಗೊಂಡಿದೆ. ನಾರ್ವೆಯಲ್ಲಿ ಪ್ರಶಸ್ತಿ ನೀಡಲಾಗುವುದು.

ADVERTISEMENT

‘ಅಬಿ ಅವರನ್ನು ಇಷ್ಟು ಬೇಗ ನೊಬೆಲ್‌ ಶಾಂತಿ ಪ್ರಶಸ್ತಿಗೆ ಪರಿಗಣಿಸಬಾರದಿತ್ತು ಎಂದು ಕೆಲವರು ಅಭಿಪ್ರಾಯಪಡಬಹುದು. ಆದರೆ, ಅಬಿ ಅಹಮದ್‌ ಅವರ ಸಾಧನೆ ಗುರುತಿಸಲು, ಪ್ರೋತ್ಸಾಹಿಸಲು ಇದು ಸಕಾಲ’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷೆ ಬೆರಿಟ್‌ ರೀಸ್‌ ಆ್ಯಂಡರ್ಸನ್‌ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಎರಿಟ್ರಿಯಾ ಜೊತೆಗಿನ ಸುದೀರ್ಘ ಕಾಲದ ಗಡಿ ಬಿಕ್ಕಟ್ಟಿಗೆ ಕೊನೆಹಾಡಲು ಆ ದೇಶದ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಿದ್ಧ ಎಂಬ ನಿಲುವು ಪ್ರಕಟಿಸಿದ್ದರು. ಇದಕ್ಕೆ ಸ್ಪಂದಿಸಿ ಎರಿಟ್ರಿಯಾದ ನಾಯಕರು ಇಥಿಯೋಪಿಯಾ ರಾಜಧಾನಿಗೆ ಭೇಟಿ ನೀಡಿದ್ದರು. ಹಿಂದೆಯೇ ಉಭಯ ದೇಶಗಳ ನಡುವೆ ಸಾರಿಗೆ ಮತ್ತು ಸಂವಹನ ಸಂಪರ್ಕ ಆರಂಭವಾಗಿತ್ತು. ಇದರ ಪರಿಣಾಮವಾಗಿ ಗಡಿಭಾಗದಲ್ಲಿ ಎರಡು ದಶಕಗಳಿಂದ ದೂರ ಉಳಿದಿದ್ದ ಬಂಧುಗಳು ಒಂದುಗೂಡಿದ್ದರು. ಅವರಲ್ಲಿ ಆನಂದಭಾಷ್ಪ ಕಟ್ಟೆಯೊಡೆದಿತ್ತು.

ದೇಶದಲ್ಲಿ ಸಾವಿರಾರು ಕೈದಿಗಳ ಬಿಡುಗಡೆ, ಪ್ರತಿಪಕ್ಷದ ಗುಂಪುಗಳ ಮೇಲಿನ ನಿಷೇಧ ರದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಇತ್ಯಾದಿ ಕ್ರಮಗಳನ್ನು ಪ್ರಕಟಿಸಿದ್ದರು. 2020ರಲ್ಲಿ ಇಥಿಯೋಪಿಯಾ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಘೋಷಿಸಿದ್ದರು.

ಈ ಎಲ್ಲ ಕಾರ್ಯಗಳ ಒಟ್ಟು ಪರಿಣಾಮವಾಗಿ ಜಾಗತಿಕವಾಗಿ ಗಮನ ಸೆಳೆದಿದ್ದ ಅಬಿ ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆ ಸಭೆಯ ಕೇಂದ್ರಬಿಂದು ಆಗಿದ್ದರು. ಪ್ರಶಸ್ತಿ ಕುರಿತು ಪ್ರಧಾನಮಂತ್ರಿಗಳ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ‘ಒಂದು ದೇಶವಾಗಿ ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಪ್ರತಿಕ್ರಿಯಿಸಿದೆ.

‘ಅನ್ಯ ನಾಯಕರಿಗೂ ಸ್ಫೂರ್ತಿಯಾಗಲಿ’
ಒಸ್ಲೊ (ಎಎಫ್‌ಪಿ):
‘ನಾನು ವಿನೀತನಾಗಿದ್ದೇನೆ. ಸುದ್ದಿ ತಿಳಿದು ರೋಮಾಂಚಿತಗೊಂಡಿದ್ದೇನೆ’ ಎಂದು ಇಥಿಯೋಪಿಯಾದ ಪ್ರಧಾನಿ
ಅಬಿ ಅಹಮದ್‌ ಪ್ರತಿಕ್ರಿಯಿಸಿದ್ದಾರೆ.

‘ಇದು, ಆಫ್ರಿಕಾಗೆ ದೊರೆತ ಪ್ರಶಸ್ತಿ. ಇಥಿಯೋಪಿಯಾಗೆ ದೊರೆತ ಪ್ರಶಸ್ತಿ. ಇದು, ಆಫ್ರಿಕಾದ ಇತರೆ ನಾಯಕರಿಗೆ ಶಾಂತಿ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡಬಹುದು ಎಂದು ಆಶಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.