ADVERTISEMENT

ಮ್ಯಾನ್ಮಾರ್‌ ಸೇನೆ ದಾಳಿ: 60 ಜನರ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 21:30 IST
Last Updated 24 ಅಕ್ಟೋಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್‌ : ಮ್ಯಾನ್ಮಾರ್‌ನ ಅಲ್ಪಸಂಖ್ಯಾತ ಕಚಿನ್‌ ಜನಾಂಗದ ಪ್ರಮುಖ ರಾಜಕೀಯ ಸಂಘಟನೆಯೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಅಲ್ಲಿನ ಸೇನೆ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಸಂಗೀತಗಾರರೂ ಸೇರಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಚಿನ್‌ ಇಂಡಿಪೆಂಡೆನ್ಸ್‌ ಆರ್ಗನೈಸೇಷನ್‌ ಎಂಬ ಸಂಘಟನೆಯು ತನ್ನ 62ನೇ ವಾರ್ಷಿಕೋತ್ಸವವನ್ನು ಅಂಗ್‌ ಬಾರ್‌ ಲೇ ಗ್ರಾಮದ ಬಳಿ ಭಾನುವಾರ ಸಂಜೆ ಆಯೋಜಿಸಿತ್ತು. ಸಮಾರಂಭವನ್ನು ಗುರಿ ಮಾಡಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸಂಘ
ಟನೆಯ ಸದಸ್ಯರು ಮತ್ತು ರಕ್ಷಣಾ ಕಾರ್ಯಕರ್ತರು ಸೋಮವಾರ ತಿಳಿಸಿದ್ದಾರೆ.‌

ರಾತ್ರಿ ಸುಮಾರು 8 ಗಂಟೆಗೆ ವಾಯುಪಡೆಯು ನಾಲ್ಕು ಬಾಂಬ್‌ಗಳನ್ನು ಸಮಾರಂಭ ನಡೆಯುತ್ತಿದ್ದ ಸ್ಥಳದ ಮೇಲೆ ಹಾಕಿದೆ. ಸುಮಾರು 500 ಜನರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಚಿನ್‌ ಅಧಿಕಾರಿಗಳು, ಸೈನಿಕರು, ಸಂಗೀತಗಾರರು ಮತ್ತು ಮುಂದಿನ ಸಾಲಿನಲ್ಲಿ ಕುಳಿತಿದ್ದ ಗಣ್ಯರಲ್ಲಿ ಹಲವರು ಸಾವಿಗೀಡಾಗಿದ್ದಾರೆ ಎಂದು ಕಚಿನ್‌ ಕಲಾವಿದರ ಸಂಘದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದನ್ನು ಸರ್ಕಾರಿ ಭದ್ರತಾ ಪಡೆಗಳು ತಡೆದವು ಎಂದು ಸ್ಥಳೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಆಂಗ್‌ ಸನ್‌ ಸೂ ಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಬೀಳಿಸಿ ಅಲ್ಲಿಯ ಸೇನೆಯು ಅಧಿಕಾರ ಕಬಳಿಸಿದಾಗಿನಿಂದ ನಡೆಸಿರುವ ಏಕ ಸಮಯದ ದಾಳಿಗಳಲ್ಲಿ ಇದೇ ಮೊದಲ ಬಾರಿಗೆ ಅತಿಹೆಚ್ಚು ಜನರ ಸಾವು ವರದಿಯಾಗಿದೆ ಎನ್ನಲಾಗಿದೆ. ಈ ಕುರಿತು ಸೇನೆ ಅಧಿಕೃತ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.