ADVERTISEMENT

ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾರ್ಕ್ ಕಾರ್ನಿ ಕೆನಡಾದ ನೂತನ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 2:38 IST
Last Updated 10 ಮಾರ್ಚ್ 2025, 2:38 IST
<div class="paragraphs"><p>ಮಾರ್ಕ್ ಕಾರ್ನಿ</p></div>

ಮಾರ್ಕ್ ಕಾರ್ನಿ

   

ರಾಯಿಟರ್ಸ್ ಚಿತ್ರ

ಟೊರೊಂಟೊ: ಕೆನಡಾದ ಆಡಳಿತಾರೂಢ ಲಿಬರಲ್‌ ಪಾರ್ಟಿಯು ಮಾರ್ಕ್‌ ಕಾರ್ನಿ ಅವರನ್ನು ದೇಶದ ಮುಂದಿನ ಪ್ರಧಾನಿಯಾಗಿ ಭಾರಿ ಬೆಂಬಲದೊಂದಿಗೆ ಆಯ್ಕೆ ಮಾಡಿದೆ.

ADVERTISEMENT

ಪಕ್ಷದ ಹೊಸ ನಾಯಕ ಮತ್ತು ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಉತ್ತರಾಧಿಕಾರಿಯ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 59 ವರ್ಷದ ಕಾರ್ನಿ ಅವರು ಮಾಜಿ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್‌ ಅವರನ್ನು ಮಣಿಸಿದರು. ಕಾರ್ನಿ ಸದ್ಯದಲ್ಲೇ ಟ್ರುಡೊ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡನ್ನೂ ಮುನ್ನಡೆಸಿದ್ದ ಅವರು ಚಲಾವಣೆಯಾದ ಸುಮಾರು 1.52 ಲಕ್ಷ ಮತಗಳಲ್ಲಿ ಶೇ 85.9 ಮತಗಳನ್ನು ಪಡೆದರು. ಫ್ರೀಲ್ಯಾಂಡ್ ಅವರಿಗೆ ಕೇವಲ ಶೇ 8ರಷ್ಟು ಮತಗಳು ದೊರೆತವು. ಅಕ್ಟೋಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಲಿಬರಲ್‌ ಪಾರ್ಟಿಯನ್ನು ಮುನ್ನಡೆಸುವರು.  

ಭಾರತದೊಂದಿಗೆ ತಮ್ಮ ದೇಶದ ಸಂಬಂಧವನ್ನು ಪುನರ್‌ ಸ್ಥಾಪಿಸುವುದಾಗಿ ಕಾರ್ನಿ ಈಚೆಗೆ ಹೇಳಿದ್ದರು. ಕ್ಯಾಲ್ಗರಿಯಲ್ಲಿ ಕಳೆದ ಮಂಗಳವಾರ ಮಾತನಾಡಿದ್ದ ಅವರು, ‘ಭಾರತದ ಜತೆಗಿನ ಸಂಬಂಧವನ್ನು ಪುನರ್‌ ಸ್ಥಾಪಿಸಲು ನಮಗೆ ಸಾಕಷ್ಟು ಅವಕಾಶಗಳಿವೆ. ಆ ವ್ಯಾಪಾರ ಸಂಬಂಧವು ಪರಸ್ಪರ ತಿಳಿವಳಿಕೆಯಿಂದ ಕೂಡಿರಬೇಕು. ನಾನು ಪ್ರಧಾನಿಯಾದರೆ, ಸಂಬಂಧ ಪುನಃ ಸ್ಥಾಪಿಸುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದರು.

ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಟ್ರುಡೊ ಆರೋಪ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.