ವಿಶ್ವವಿದ್ಯಾಲಯದಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ನಡೆದ ಪ್ರತಿಭಟನೆ
ರಾಯಿಟರ್ಸ್ ಚಿತ್ರ
Harvard vs Trump controversy: ಅಮೆರಿಕದ ಹಾರ್ವರ್ಡ್ ವಿವಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷವು ಭಾರತ ಸೇರಿದಂತೆ ವಲಸೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ವಾಷಿಂಗ್ಟನ್: ಅಮೆರಿಕದ ಎಂಟು ಅಧ್ಯಕ್ಷರಿಗೆ ಆಡಳಿತದ ಪಾಠ ಹೇಳಿಕೊಟ್ಟ ಹಾಗೂ ಮಾರ್ಕ್ ಝುಕರ್ಬರ್‌ಗ್‌ಗೆ ಫೇಸ್‌ಬುಕ್‌ನ ಮಾದರಿ ಸಿದ್ಧಪಡಿಸಲು ಪ್ರಯೋಗಾಲಯವಾದ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವು ಹಲವರ ಕನಸಿನ ಜ್ಞಾನದೇಗುಲ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿರುವ ಈ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯದ ಜತೆಗೆ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದೆ.
ಸಂಶೋಧನಾ ಪ್ರಬಂಧದ ವಿಷಯದಲ್ಲಿ ಇತ್ತೀಚೆಗೆ ಹಾರ್ವರ್ಡ್‌ನ ಕುಲಪತಿಗೆ ರಾಜೀನಾಮೆ ಸಲ್ಲಿಸಲು ಅಮೆರಿಕದ ವಿಶ್ವವಿದ್ಯಾಲಯ ಸೂಚಿಸಿತ್ತು. ‘ಸರ್ಕಾರ ಹೇಳಿದ್ದನ್ನು ಕೇಳಲಿಲ್ಲವೆಂದರೆ, ವಿದೇಶಿ ವಿದ್ಯಾರ್ಥಿಗಳ ನೋಂದಣಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂಬ ಗುಟುರು ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲ, ಅಲ್ಲಿಯೇ ಅಧ್ಯಯನ ಮಾಡಬೇಕೆಂಬ ಕನಸು ಕಂಡಿರುವ ಭಾರತ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ರಾಜಕೀಯ, ಸೈದ್ಧಾಂತಿಕ ಮತ್ತು ಭಯೋತ್ಪಾದನೆಯಂಥ ‘ಕಾಯಿಲೆ’ಗೆ ನೆರವಾದರೆ ತೆರಿಗೆ ರಿಯಾಯಿತಿ ಸ್ಥಾನಮಾನವನ್ನೂ ಕಸಿದುಕೊಳ್ಳುವ ಹಾಗೂ ಸಂಶೋಧನೆಗಾಗಿ ನೀಡುತ್ತಿದ್ದ 2 ಶತಕೋಟಿ ಅಮೆರಿಕನ ಡಾಲರ್ (₹17 ಸಾವಿರ ಕೋಟಿ) ತಡೆಹಿಡಿಯುವ ಎಚ್ಚರಿಕೆಯನ್ನು ಟ್ರಂಪ್ ಸರ್ಕಾರ ಹಾರ್ವರ್ಡ್‌ಗೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಾರ್ವರ್ಡ್, ಸರ್ಕಾರ ಇಂಥ ಕ್ರಮ ಕೈಗೊಂಡರೆ ಅದು ವಿಶ್ವವಿದ್ಯಾಲಯದ ಸಾಂಸ್ಥಿಕ ಸ್ವಾಯತ್ತತೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂದಿದೆ. ಸರ್ಕಾರ ಕ್ರಮ ಕೈಗೊಂಡಿದ್ದೇ ಆದರೆ, ವಾರ್ಷಿಕ ಅನುದಾನ ಮೂಲಕ ಸಿಗುವ 53 ಶತಕೋಟಿ ಅಮೆರಿಕನ್ ಡಾಲರ್ (₹ 4.52 ಲಕ್ಷ ಕೋಟಿ) ಅನ್ನು ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಡೊನಾಲ್ಡ್ ಟ್ರಂಪ್
ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಹಾರ್ವರ್ಡ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಬೇಕು. ಯಹೂದಿ ವಿದ್ಯಾರ್ಥಿಗಳ ಹಿತ ಕಾಯದಿರುವುದು ತಪ್ಪು. ಸೈದ್ಧಾಂತಿಕ ನಿಲುವನ್ನು ಉತ್ತೇಜಿಸಬೇಕು ಎಂದು ಟ್ರಂಪ್ ಸರ್ಕಾರ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತಾಕೀತು ಮಾಡಿತ್ತು.
ಇದನ್ನು ನಿರಾಕರಿಸಿದ್ದ ವಿಶ್ವವಿದ್ಯಾಲಯ, ತಾನು ಶೈಕ್ಷಣಿಕ ಸ್ವಾತಂತ್ರ್ಯ, ಸಾಂಸ್ಥಿಕ ಸ್ವಾಯತ್ತತೆ ಮತ್ತು ಅಂತರ್ಗತ ಕಲಿಕೆಯ ವಾತಾವರಣ ಸೃಷ್ಟಿಸಲು ಬದ್ಧ ಎಂದಿತ್ತು.
ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಒಟ್ಟು 53 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಅನುದಾನ ಪಡೆಯುತ್ತಿದೆ. ಆದರೆ ಇದನ್ನು ಸುಲಭವಾಗಿ ಬಳಸುವಂತಿಲ್ಲ. ಇದರಲ್ಲಿ ಬಹುತೇಕ ಮೊತ್ತವು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ವಿಜ್ಞಾನ, ಎಂಜಿನಿಯರಿಂಗ್ ಸಂಶೋಧನಾ ಕ್ಷೇತ್ರದಲ್ಲಿ ಬಳಸಬೇಕೆಂದು ಷರತ್ತು ಇದೆ. ಈ ನಿಧಿ ಇಲ್ಲದಿದ್ದರೆ ಹಲವು ಸಂಶೋಧನೆಗಳೇ ಸ್ಥಗಿತಗೊಳ್ಳುವ ಇಲ್ಲವೇ ವಿಳಂಬವಾಗುವ ಸಾಧ್ಯತೆಗಳಿವೆ.
ಕ್ಯಾನ್ಸರ್, ಮರೆಗುಳಿತನ, ಎಚ್‌ಐವಿ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸಂಶೋಧನೆಗಳು ಹಾರ್ವರ್ಡ್‌ನಲ್ಲಿ ಈ ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ. ತನಗೆ ಲಭ್ಯವಾಗುತ್ತಿರುವ ಸರ್ಕಾರದ ಅನುದಾನದ ಶೇ 46ರಷ್ಟು ಇವುಗಳಿಗೇ ಖರ್ಚಾಗುತ್ತಿವೆ. ಅನುದಾನ ಸ್ಥಗಿತಗೊಂಡರೆ ಯೋಜನೆಗಳೂ ನಿಲ್ಲಬಹುದು ಎಂದು ಇಲ್ಲಿನ ತಜ್ಞರು ಹೇಳುತ್ತಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಫಲಕ ಹಿಡಿದು ಸಾಗಿದ ವಿದ್ಯಾರ್ಥಿಗಳು
ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಟ್ರಂಪ್ ಸರ್ಕಾರದ ಗುದ್ದಾಟದಿಂದ ಒಂದೊಮ್ಮೆ ಅನುದಾನ ಸ್ಥಗಿತಗೊಂಡರೆ, ಹಲವು ಸಂಶೋಧನೆಗಳು, ಅಧ್ಯಯನ ಪೀಠಗಳು, ಸಂಶೋಧನಾ ಅವಕಾಶಗಳು ಸ್ಥಗಿತಗೊಳ್ಳಬಹುದು. ಅನುದಾನವಿಲ್ಲದಿದ್ದರೆ ಪ್ರಾಧ್ಯಾಪಕರು ಮತ್ತು ಸಂಶೋಧಕರು ವಿಶ್ವವಿದ್ಯಾಲಯ ತೊರೆಯುವುದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗದೆ ಸಮಸ್ಯೆಯಾಗಲಿದೆ.
ವಿದೇಶಿ ವಿದ್ಯಾರ್ಥಿಗಳಿಗೆ ವಿಸಾ ನವೀಕರಣವಾಗದೆ ಅಥವಾ ಶಿಷ್ಯವೇತನ ಸಿಗದೆ ಪರದಾಡಬೇಕಾಗಬಹುದು. ಹೀಗಾಗಿ ಭಾರತ, ಚೀನಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳು ತೀವ್ರವಾಗಿ ಚಿಂತಿತರಾಗಿದ್ದಾರೆ. ಒಂದೊಮ್ಮೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾದರೆ ಎಫ್–1 ಮತ್ತು ಜೆ–1 ವಿಸಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ದೇಶ ತೊರೆಯಬೇಕಾಗಬಹುದು.
ಟ್ರಂಪ್ ಸರ್ಕಾರದ ಹೊಸ ಕಾನೂನಿನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರ್ಬಂಧ ಹಾಗೂ ಅವರ ಮೇಲೆ ಕಣ್ಗಾವಲು ಹೆಚ್ಚಾಗಿದೆ. ಜತೆಗೆ ಹಿಂದಿನ ವಲಸೆ ನೀತಿಯಲ್ಲಿ ಬದಲಾವಣೆ ತಂದಿರುವುದರಿಂದ ಅಧ್ಯಯನಕ್ಕಾಗಿ ಉಳಿದುಕೊಳ್ಳುವುದು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅಷ್ಟು ಸುಲಭದ ಮಾತಾಗಿಲ್ಲ.
ಅನುದಾನ ಸ್ಥಗಿತಗೊಳಿಸಲು ಮುಂದಾದ ಸರ್ಕಾರದ ಕ್ರಮದ ವಿರುದ್ಧ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮೆಸಾಚುಸಾಟ್ಸ್ ತಾಂತ್ರಿಕ ಸಂಸ್ಥೆ (ಎಂಐಟಿ) ನ್ಯಾಯಾಲಯದ ಮೆಟ್ಟಿಲೇರಿವೆ. ಆಡಳಿತ ನಿಯಮಗಳ ಕಾಯ್ದೆಯನ್ನು ಸರ್ಕಾರ ಉಲ್ಲಂಘಿಸುತ್ತಿದ್ದು, ಅದರ ನಿರ್ಧಾರಗಳು ರಾಜಕೀಯ ಪ್ರೇರಿತವಾಗಿದ್ದು, ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿವೆ ಎಂದು ಆರೋಪಿಸಿವೆ.
ಒಂದೊಮ್ಮೆ ಹಾರ್ವರ್ಡ್ ತನ್ನ ನಿಲುವಿಗೆ ಬದ್ಧವಾದಲ್ಲಿ, ಅದರ ಮೇಲೆ ಹೆಚ್ಚಿನ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಕಾನೂನು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯ ಅನುಸರಣೆಗೆ ಅನುಗುಣವಾಗಿ ಸಂಶೋಧನಾ ಅನುದಾನವನ್ನು ಷರತ್ತಿನ ಆಧಾರದಲ್ಲಿ ನೀಡುವ ನಿಲುವಿಗೆ ಸರ್ಕಾರ ಬರಬಹುದು. ಇದರಲ್ಲಿ ನ್ಯಾಯಾಲಯದ ಒಪ್ಪಿಗೆಯನ್ನೂ ಸರ್ಕಾರ ಪಡೆಯಬಹುದು ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.