ADVERTISEMENT

ದಂಡ ನೀಡಲು ಒಪ್ಪಿದ ಫೇಸ್‌ಬುಕ್‌

ಕೇಂಬ್ರಿಜ್‌ ಅನಲಿಟಿಕಾ ಸಂಸ್ಥೆಗೆ ಮಾಹಿತಿ ಸೋರಿಕೆ ಪ್ರಕರಣ

ರಾಯಿಟರ್ಸ್
Published 30 ಅಕ್ಟೋಬರ್ 2019, 20:16 IST
Last Updated 30 ಅಕ್ಟೋಬರ್ 2019, 20:16 IST
ಮಾರ್ಕ್‌ ಝುಕರ್‌ಬರ್ಗ್‌
ಮಾರ್ಕ್‌ ಝುಕರ್‌ಬರ್ಗ್‌   

ಲಂಡನ್‌: ಮಾಹಿತಿ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ 6.44 ಲಕ್ಷ ಡಾಲರ್‌ (₹4.5 ಕೋಟಿ) ದಂಡ ನೀಡಲು ಫೇಸ್‌ಬುಕ್‌ ಒಪ್ಪಿಕೊಂಡಿದೆ.

ಕೇಂಬ್ರಿಜ್‌ ಅನಲಿಟಿಕಾ ಕಂಪನಿಗೆ ದತ್ತಾಂಶ ನೀಡುವ ಮೂಲಕ ದತ್ತಾಂಶ ಭದ್ರತೆಯ ಕಾನೂನು ಉಲ್ಲಂಘಿಸಿರುವ ಪ್ರಕರಣ ಇದಾಗಿದೆ ಎಂದು ಬ್ರಿಟನ್‌ನ ಮಾಹಿತಿ ಹಕ್ಕುಗಳ ನಿಯಂತ್ರಣ ಸಂಸ್ಥೆ ಹೇಳಿದೆ.

ಈ ರಾಜಕೀಯ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್‌ ಅನಲಿಟಿಕಾಗೆ, ಫೇಸ್‌ಬುಕ್‌ನ 8.7 ಕೋಟಿ ಬಳಕೆದಾರರ ಮಾಹಿತಿ ಹೇಗೆ ದೊರೆಯಿತು ಎಂಬ ಬಗ್ಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಕಾನೂನು ನಿರೂಪಕರು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ ಅವರನ್ನು ಪ್ರಶ್ನಿಸಿದ್ದರು.

ADVERTISEMENT

ಹತ್ತು ಲಕ್ಷ ಬ್ರಿಟಿಷ್‌ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಜ್‌ ಅನಲಿಟಿಕಾ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದೆ ಎಂಬುದು ಗೊತ್ತಾಗಿದ್ದರಿಂದ ಕಳೆದ ವರ್ಷವೇ ಮಾಹಿತಿ ಆಯುಕ್ತರ ಕಚೇರಿ(ಐಸಿಒ), ಫೇಸ್‌ಬುಕ್‌ಗೆ ಸಾಂಕೇತಿಕ ದಂಡ ವಿಧಿಸಿತ್ತು.

ಮೇಲ್ಮನವಿಯನ್ನು ಕೈಬಿಟ್ಟು ದಂಡ ನೀಡಲು ಒಪ್ಪಿಕೊಂಡಿರುವ ಫೇಸ್‌ಬುಕ್‌ ಯಾವುದೇ ಇತರ ಹೊಣೆಗಾರಿಕೆ
ಯನ್ನು ಒಪ್ಪಿಕೊಂಡಿಲ್ಲ ಎಂದು ಐಸಿಒ ಬುಧವಾರ ಹೇಳಿದೆ.

ಬ್ರಿಟನ್ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಗಂಭೀರವಾಗಿ
ಅಪಾಯಕ್ಕೊಡ್ಡಿರುವ ಬಗ್ಗೆ ಆಯುಕ್ತರ ಕಚೇರಿ (ಐಸಿಒ) ಆತಂಕಗೊಂಡಿದೆ. ವೈಯಕ್ತಿಕ ಮಾಹಿತಿ ಮತ್ತು ಖಾಸಗಿತನವನ್ನು ರಕ್ಷಿಸುವುದು ಮೂಲಭೂತ ಆದ್ಯತೆಯಾಗಿರುತ್ತದೆ ಎಂದು ಐಸಿಒನ ಉಪ ಆಯುಕ್ತ ಜೇಮ್ಸ್‌ ಡಿಪ್ಲ್‌ ಜಾನ್‌ಸ್ಟೋನ್‌ ಹೇಳಿದ್ದಾರೆ.

ಇದೀಗ ಫೇಸ್‌ಬುಕ್‌ ಮಾಹಿತಿ ಸುರಕ್ಷತೆಯ ಮೂಲ ತತ್ವಗಳಿಗೆ ಬದ್ಧವಾಗಿರಲು ಒಪ್ಪಿಕೊಂಡಿರುವುದು ಸಂತೋಷದ ವಿಷಯ ಎಂದೂ ಅವರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಬಂದಿರುವ ಬಗ್ಗೆ ಫೇಸ್‌ಬುಕ್‌ ಕೂಡ ಸಂತಸ ವ್ಯಕ್ತಪಡಿಸಿದೆ. ‘ಈ ಪ್ರಕರಣದ ಬಳಿಕ ಮಹತ್ವದ ಬದಲಾವಣೆಗಳು ನಡೆದಿವೆ. ಅದರಲ್ಲಿಯೂ ಆ್ಯಪ್‌ ಅಭಿವೃದ್ಧಿಪಡಿಸುವವರು ಮಾಹಿತಿ ಪಡೆಯುವುದಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಲಾಗಿದೆ ಎಂದು ಫೇಸ್‌ಬುಕ್‌ನ ಅಸೋಸಿಯೇಟ್‌ ಜನರಲ್‌ ಕೌನ್ಸೆಲ್‌ ಹ್ಯಾರಿ ಕಿನ್‌ಮೌತ್‌ ಹೇಳಿದ್ದಾರೆ. ಜನರ ಮಾಹಿತಿ ಮತ್ತು ಖಾಸಗಿತನವನ್ನು ಸಂರಕ್ಷಿಸಲು ಫೇಸ್‌ಬುಕ್‌ ಆದ್ಯತೆ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.