ADVERTISEMENT

ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆಗೆ ಫೇಸ್‌ಬುಕ್‌ ನಿರ್ಬಂಧ

ಏಜೆನ್ಸೀಸ್
Published 18 ಫೆಬ್ರುವರಿ 2021, 22:15 IST
Last Updated 18 ಫೆಬ್ರುವರಿ 2021, 22:15 IST
.
.   

ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆ ಮಾಡುವುದಕ್ಕೆ ಫೇಸ್‌ಬುಕ್‌ ಗುರುವಾರ ನಿರ್ಬಂಧ ವಿಧಿಸಿದೆ.

ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾನೂನಿನ ಪ್ರಕಾರ ಸುದ್ದಿ, ಲೇಖನ ಸೇರಿದಂತೆ ಇತರೆ ವಿಷಯಗಳನ್ನು ಬಳಸಿಕೊಳ್ಳಲು ಡಿಜಿಟಲ್‌ ದೈತ್ಯ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕಾಗುತ್ತದೆ. ಈ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

ತುರ್ತು ಸೇವೆಗಳ ವಿಷಯ ಸೇರಿ ಸರ್ಕಾರ ನೀಡುವ ಹಲವು ಸಂದೇಶಗಳಿಗೂ ನಿರ್ಬಂಧ ವಿಧಿಸಲಾಗಿದೆ. ಆರೋಗ್ಯ, ಅಗ್ನಿಶಾಮಕ ಮತ್ತು ಇತರ ತುರ್ತುಸೇವೆಗಳ ಪುಟಗಳನ್ನು ಯಥಾಸ್ಥಿತಿ ಉಳಿಸುವಂತೆ ಫೇಸ್‌ಬುಕ್‌ಗೆ ಆಸ್ಟ್ರೇಲಿಯಾ ಸರ್ಕಾರ ಸೂಚಿಸಿದೆ.

ADVERTISEMENT

ಈ ನಿರ್ಧಾರ ದುಬಾರಿಯಾಗಿ ಪರಿಣಮಿಸಲಿದೆ. ಜೊತೆಗೆ ಇತರ ದೊಡ್ಡ ರಾಷ್ಟ್ರಗಳು ಸಹ ಇದೇ ನೀತಿಯನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ಫೇಸ್‌ಬುಕ್‌ ಅಭಿಪ್ರಾಯಪಟ್ಟಿದೆ.

ಆಸ್ಟ್ರೇಲಿಯಾದ ಪ್ರಕಾಶಕರು ಫೇಸ್‌ಬುಕ್‌ನಲ್ಲಿ ಸುದ್ದಿ ಪ್ರಕಟಿಸುವುದನ್ನು ಮುಂದುವರಿಸಬಹುದು. ಆದರೆ ಅದರ ಲಿಂಕ್‌ಗಳು ಮತ್ತು ಪೋಸ್ಟ್‌ಗಳನ್ನು ಆಸ್ಟ್ರೇಲಿಯಾದವರು ವೀಕ್ಷಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.

‘ಪ್ರಸ್ತಾವಿತ ಕಾನೂನು ನಮ್ಮ ವೇದಿಕೆ ಮತ್ತು ಸುದ್ದಿಯನ್ನು ಹಂಚಿಕೊಳ್ಳಲು ಬಳಸುವ ಪ್ರಕಾಶಕರ ನಡುವಿನ ಸಂಬಂಧವನ್ನು ತಪ್ಪಾಗಿ ಅರ್ಥೈಸುತ್ತದೆ’ ಎಂದು ಫೇಸ್‌ಬುಕ್ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ವಿಲಿಯಂ ಈಸ್ಟನ್ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರ ಕಾನೂನು ಜಾರಿಗೊಳಿಸಲು ಮುಂದಾದರೆ ಪ್ರತಿಕಾರದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಫೇಸ್‌ಬುಕ್‌ ಮತ್ತು ಗೂಗಲ್‌ ಬೆದರಿಕೆ ಹಾಕಿದ್ದವು. ಈ ಕಾನೂನು ಜಾರಿಗೊಳಿಸಲು ಮುಂದಾದರೆ ಸರ್ಚ್‌ ಎಂಜಿನ್‌ಗಳನ್ನು ತೆಗೆದುಹಾಕಬೇಕಾಗುತ್ತದೆ ಎಂದು ಗೂಗಲ್‌ ಬೆದರಿಕೆ ಹಾಕಿದೆ.

ಬ್ರಿಟನ್‌ ಸುದ್ದಿ ಮಾಧ್ಯಮ ಸಂಸ್ಥೆಗಳ ಆಕ್ರೋಶ
ಲಂಡನ್‌ (ರಾಯಿಟರ್ಸ್‌):ಆಸ್ಟ್ರೇಲಿಯಾದಲ್ಲಿ ಸುದ್ದಿಗಳಿಗೆ ನಿರ್ಬಂಧ ವಿಧಿಸುವ ಫೇಸ್‌ಬುಕ್‌ ಕ್ರಮಕ್ಕೆ ಬ್ರಿಟನ್‌ನ ಸುದ್ದಿ ಮಾಧ್ಯಮಗಳ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.

ತಂತ್ರಜ್ಞಾನ ದೈತ್ಯ ಸಂಸ್ಥೆಗಳು ಬೆದರಿಕೆ ಹಾಕುವ ತಂತ್ರಕ್ಕೆ ಕಡಿವಾಣ ಹಾಕಲು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.

‘ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ’
ಫೇಸ್‌ಬುಕ್‌ನ ಈ ಕ್ರಮಕ್ಕೆ ಆಸ್ಟ್ರೇಲಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮತ್ತು ಅಧಿಕಾರ ದುರುಪಯೋಗದ ವಿಷಯವಾಗಿದೆ ಎಂದು ಕಿಡಿಕಾರಿದೆ.

‘ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಷಯ ಇದಾಗಿದೆ. ತಂತ್ರಜ್ಞಾನದ ಮತ್ತು ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವದಾಗಿದೆ’ ಎಂದು ಆರೋಗ್ಯ ಸಚಿವ ಗ್ರೆಗ್‌ ಹಂಟ್‌ ಸಂಸತ್‌ನಲ್ಲಿ ತಿಳಿಸಿದ್ದಾರೆ.

‘ಜನಪ್ರತಿನಿಧಿಗಳ ಸಭೆ ಹೊಸ ಕಾನೂನಿಗೆ ಅನುಮೋದನೆ ನೀಡಿದೆ. ಸೆನೆಟ್‌ ಅನುಮೋದನೆ ನೀಡಿದ ಬಳಿಕ ಈ ಕಾನೂನು ಜಾರಿಯಾಗುತ್ತದೆ ಈ ಕಾಯ್ದೆ ಅನ್ವಯ ಆಸ್ಟ್ರೇಲಿಯಾದ ಪತ್ರಿಕೋದ್ಯಮಕ್ಕೆ ಫೇಸ್‌ಬುಕ್‌ ಮತ್ತು ಗೂಗಲ್‌ ಹಣ ಪಾವತಿಸಬೇಕಾಗುತ್ತದೆ. ಇದರಿಂದಾಗಿ, ಫೇಸ್‌ಬುಕ್‌ ಇಂತಹ ಕಠಿಣ ನಿಲುವು ಕೈಗೊಂಡಿದೆ. ಫೇಸ್‌ಬುಕ್‌ನ ಈ ಕ್ರಮ ಅನಗತ್ಯವಾಗಿತ್ತು’ ಎಂದು ಆಸ್ಟ್ರೇಲಿಯಾ ಸಂಸದ ಜೋಷ್‌ ಫ್ರಿಡನ್‌ಬರ್ಗ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.