ADVERTISEMENT

ಭಾರತಕ್ಕೆ 200 ವೆಂಟಿಲೇಟರ್ ಒದಗಿಸಲು ಅಮೆರಿಕ ನಿರ್ಧಾರ

ಶೀಘ್ರ ಭಾರತ ತಲುಪಲಿವೆ 50 ವೆಂಟಿಲೇಟರ್‌

ಪಿಟಿಐ
Published 19 ಮೇ 2020, 12:41 IST
Last Updated 19 ಮೇ 2020, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ಭಾರತಕ್ಕೆ 200 ವೆಂಟಿಲೇಟರ್‌ಗಳನ್ನು ನೀಡಲು ಅಮೆರಿಕ ನಿರ್ಧರಿಸಿದೆ. ಈ ಪೈಕಿ 50 ವೆಂಟಿಲೇಟರ್‌ಗಳು ಶೀಘ್ರ ಭಾರತ ತಲುಪಲಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ವೆಂಟಿಲೇಟರ್‌ಗಳನ್ನು ಭಾರತಕ್ಕೆ ವೆಂಟಿಲೇಟರ್‌ಗಳನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದರು. ಅಮೆರಿಕದ ಪರವಾಗಿ ಅಲ್ಲಿನ ಯುಎಸ್‌ಎಐಡಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ವೈದ್ಯಕೀಯ ಉಪಕರಣಗಳು ಹಾಗೂ ವೆಂಟಿಲೇಟರ್‌ಗಳನ್ನು ಪೂರೈಸುತ್ತಿದೆ. ಇದು ಅಮೆರಿಕ ಸರ್ಕಾರದ ‘ದೇಣಿಗೆ’ಯಾಗಿದ್ದು, ಯಾವುದೇ ಹಣ ಪಡೆದುಕೊಳ್ಳುತ್ತಿಲ್ಲ ಎಂದು ಯುಎಸ್ಎಐಡಿ ನಿರ್ದೇಶಕಿ ರಮೋನ ಎಲ್‌ ಹಮ್‌ಜೌರಿ ಹೇಳಿದ್ದಾರೆ.

‘ದೇಣಿಗೆಯಾಗಿ ಕೊಡುವಂತಹ ವೆಂಟಿಲೇಟರ್‌ಗಳನ್ನು ಯಾವ ಆಸ್ಪತ್ರೆಗಳಿಗೆ ನೀಡಬೇಕು ಎನ್ನುವುದರ ಕುರಿತು ಆರೋಗ್ಯ ಸಚಿವಾಲಯ ಮತ್ತು ರೆಡ್‌ ಕ್ರಾಸ್‌ ಸಂಸ್ಥೆ ಜೊತೆಗೆ ಚರ್ಚಿಸುತ್ತಿದ್ದೇವೆ. ವಿಶ್ವದಾದ್ಯಂತ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಯುಎಸ್‌ಎಐಡಿ ಹಾಗೂ ಅಮೆರಿಕ ಜೊತೆಯಾಗಿ ಆರ್ಥಿಕ ನೆರವು ನೀಡುತ್ತಿವೆ. ಭಾರತಕ್ಕೂ ಅನುದಾನ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ತಮ್ಮ ದೇಶವು ಭಾರತಕ್ಕೆ ವೆಂಟಿಲೇಟರ್‌ಗಳನ್ನು ದಾನ ನೀಡಲಿದೆಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.