ADVERTISEMENT

ಆಸ್ಟ್ರೇಲಿಯಾ: ಸಿಡ್ನಿಗೂ ವ್ಯಾಪಿಸಿದ ಕಾಳ್ಗಿಚ್ಚು

ಏಜೆನ್ಸೀಸ್
Published 12 ನವೆಂಬರ್ 2019, 22:00 IST
Last Updated 12 ನವೆಂಬರ್ 2019, 22:00 IST
ಟೆರಿ ಸಮೀಪದ ಹಿಲ್ಸ್‌ವಿಲ್ಲೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಮನೆಯೊಂದನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರತರಾಗಿದ್ದರು –ಎಎಫ್‌ಪಿ ಚಿತ್ರ
ಟೆರಿ ಸಮೀಪದ ಹಿಲ್ಸ್‌ವಿಲ್ಲೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಮನೆಯೊಂದನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರತರಾಗಿದ್ದರು –ಎಎಫ್‌ಪಿ ಚಿತ್ರ   

ಟರ‍್ರಮಾರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಪೂರ್ವಭಾಗದಲ್ಲಿ ಹಬ್ಬಿರುವ ಕಾಳ್ಗಿಚ್ಚು ಮಂಗಳವಾರ ಸಿಡ್ನಿಗೂ ವ್ಯಾಪಿಸಿದೆ. ಅಗ್ನಿಶಾಮಕ ದಳದವರು 100ಕ್ಕೂ ಹೆಚ್ಚು ಹೆಲಿಕಾಪ್ಟರ್ ಹಾಗೂ ವಿಮಾನಗಳನ್ನು ಬಳಸಿ ಕಾಳ್ಗಿಚ್ಚು ನಂದಿಸುವಲ್ಲಿ ನಿರತರಾಗಿದ್ದಾರೆ.

ಟರ್‍ರಮಾರಾದ ಉತ್ತರ ತೀರದಲ್ಲಿ, ಯೂಕಲಿಪ್ಟ್ ಅರಣ್ಯದಲ್ಲಿ ಹಬ್ಬಿದ ಕಾಳ್ಗಿಚ್ಚು ಜನವಸತಿ ಪ್ರದೇಶಕ್ಕೂ ವ್ಯಾಪಿಸಿತ್ತು. ಆದರೆ ಇದನ್ನು ತಕ್ಷಣವೇ ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಯಿತು. ಆದರೆ ಇಡೀ ಪ್ರದೇಶದಲ್ಲಿನ ಗಾಳಿಯಲ್ಲಿ ದಟ್ಟ ಹೊಗೆ ಸೇರಿಕೊಂಡಿದೆ.

ನ್ಯೂ ಸೌತ್‌ ವೇಲ್ಸ್‌ನಲ್ಲಿ ಅಗ್ನಿಶಾಮಕ ದಳದ ಸಾವಿರಾರು ಸಿಬ್ಬಂದಿ, ಬೆಂಕಿ ಹಬ್ಬುವುದನ್ನು ತಡೆಯುವ ಕಾರ್ಯದಲ್ಲಿ ತೊಡಗಿದ್ದರು.

‘100ಕ್ಕೂ ಹೆಚ್ಚು ಕಾಳ್ಗಿಚ್ಚು ವ್ಯಾಪಿಸಿದ್ದು ಇವುಗಳಲ್ಲಿ ನಿರ್ದಿಷ್ಟವಾಗಿ 13 ಕಾಳ್ಗಿಚ್ಚುಗಳು ನೇರವಾಗಿ ಜನವಸತಿ ಪ್ರದೇಶಗಳ ಮೇಲೆ ಪರಿಣಾಮ ಬೀರುವ ಅಪಾಯ ಇದೆ’ ಎಂದು ಎಚ್ಚರಿಕೆ ನೀಡಲಾಗಿದೆ.

‘ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಇದ್ದು, ಗಾಳಿಯ ವೇಗ ಗಂಟೆಗೆ 80 ಕಿ.ಮೀ. ಇದೆ. ಇದರಿಂದಾಗಿ ಪರಿಸ್ಥಿತಿ ಭೀಕರ ರೂಪ ಪಡೆದಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಕಾಳ್ಗಿಚ್ಚಿಗೆ ತುತ್ತಾಗುವ ಸಾಧ್ಯತೆ ಇರುವ ಪ್ರದೇಶಗಳ ಜನರಿಗೆ ಸೋಮವಾರ ಮುನ್ನೆಚ್ಚರಿಕೆ ನೀಡಲಾಗಿತ್ತು. ಹಲವಾರು ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ. ಇನ್ನೂ ಹಲವರು ಸ್ಥಳಾಂತರಗೊಂಡಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ 600ಕ್ಕೂ ಹೆಚ್ಚು ಶಾಲೆಗಳಿಗೆ ರಜೆ ನೀಡಲಾಗಿದ್ದು, ಹಲವಾರು ರಾಷ್ಟ್ರೀಯ ಉದ್ಯಾನಗಳನ್ನು ಮುಚ್ಚಲಾಗಿದೆ.

ಜನವಸತಿ ಪ್ರದೇಶದ ಸಮೀಪ ಹಬ್ಬಿದ್ದ ಕಾಳ್ಗಿಚ್ಚು ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರತರಾಗಿದ್ದರು –ರಾಯಿಟರ್ಸ್ ಚಿತ್ರ

ಆತಂಕಗೊಂಡ ನಿವಾಸಿಗಳು: ನಮ್ಮ ಮನೆಯ ಮುಂದಿನ ಅಂಗಳದಲ್ಲಿಯೇ ಕಾಣಿಸಿಕೊಂಡ ಬೆಂಕಿಯ ಕಿಡಿ, ಒಂದು ಬದಿಯ ಛಾವಣಿಯನ್ನೇ ಆಹುತಿ ತೆಗೆದುಕೊಂಡಿತು ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

‘ನಮ್ಮ ಮನೆ ಎದುರು ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಪೊಲೀಸರು ನಮ್ಮ ಮಕ್ಕಳನ್ನು ರಕ್ಷಿಸಿದರು’ ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಾಫ್ಸ್ ಬಂದರು ಸಮೀಪದ ನಾನಾ ಗ್ಲೆನ್‌ನಲ್ಲಿ ಹಬ್ಬಿದ್ದ ಕಾಳ್ಗಿಚ್ಚು ನಂದಿಸುವಲ್ಲಿ ಅಗ್ನಿಶಾಮಕ ದಳದ ಟ್ರಕ್ ಕಾರ್ಯನಿರತವಾಗಿತ್ತು –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.