ADVERTISEMENT

ಟೊಕಿಯೊ: ಎರಡು ವಿಮಾನಗಳ ನಡುವೆ ಡಿಕ್ಕಿ– ಜಪಾನ್ ಕೋಸ್ಟ್ ಗಾರ್ಡ್‌ನ ಐವರ ಸಾವು

ಏಜೆನ್ಸೀಸ್
Published 2 ಜನವರಿ 2024, 14:24 IST
Last Updated 2 ಜನವರಿ 2024, 14:24 IST
<div class="paragraphs"><p>ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ರಾಯಿಟರ್ಸ್ ಚಿತ್ರ

ಟೊಕಿಯೊ: ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ 'ಜಪಾನ್ ಏರ್‌ಲೈನ್‌' ವಿಮಾನವೊಂದು ಇನ್ನೊಂದು ವಿಮಾನಕ್ಕೆ ಮಂಗಳವಾರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ.

ADVERTISEMENT

ಜಪಾನ್ ಏರ್‌ಲೈನ್ಸ್‌ನ 'ಏರ್‌ಬಸ್ ಎ350' ವಿಮಾನ ಲ್ಯಾಂಡಿಂಗ್ ವೇಳೆ ಕೋಸ್ಟ್‌ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ತಕ್ಷಣವೇ ಕೋಸ್ಟ್‌ ಗಾರ್ಡ್‌ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ, ಅದರಲ್ಲಿದ್ದ ಐವರು ಸಿಬ್ಬಂದಿ ಸ್ಥಳದಲ್ಲೇ ಮೃತರಾಗಿದ್ದಾರೆ.

379 ಪ್ರಯಾಣಿಕರು ಇದ್ದ 'ಏರ್‌ಬಸ್ ಎ350' ವಿಮಾನಕ್ಕೂ ಬೆಂಕಿ ಹೊತ್ತಿಕೊಂಡಿತ್ತು. ಆದರೆ, ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಪವಾಡ ಸದೃಶರೀತಿಯಲ್ಲಿ ಪಾರಾಗಿದ್ದಾರೆ.

ಬೃಹತ್ ವಿಮಾನ ಕೋಸ್ಟ್‌ ಗಾರ್ಡ್‌ನ ಲಘು ವಿಮಾನಕ್ಕೆ ಡಿಕ್ಕಿ ಹೊಡೆದಿದ್ದರಿಂದ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು ಇದರಿಂದ ಸಿಬ್ಬಂದಿಯನ್ನು ರಕ್ಷಿಸಲಾಗಲಿಲ್ಲ. ತನಿಖೆ ನಡೆಯುತ್ತಿರುವುದರಿಂದ ಈಗಲೇ ಘಟನೆಗೆ ಏನು ಕಾರಣ ಎಂದು ಹೇಳಲಾಗುವುದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದು, ವಿಮಾನ ನಿಲ್ದಾಣದ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಜಪಾನ್ ಏರ್‌ಲೈನ್ಸ್‌ ವಿಮಾನ Shin-Chitose ದಿಂದ ಟೊಕಿಯೊಕ್ಕೆ ಬರುತ್ತಿತ್ತು. ವಿಮಾನದಲ್ಲಿ ಸಿಬ್ಬಂದಿ ಸೇರಿ 379 ಜನ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ.

ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಪಾನ್‌ನ ಭಾರಿ ಜನದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.