
ಸಾಂದರ್ಭಿಕ ಚಿತ್ರ
ಕೃಪೆ:ಎಐ
ವಾಷಿಂಗ್ಟನ್: ಆತನಿಗೆ ಕೇವಲ 5 ವರ್ಷ ವಯಸ್ಸು, ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತರು ಬಂದು ಜೀಪಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಬಂದವರು ಯಾರು? ಯಾಕೆ ತನ್ನನ್ನು ಕರೆದುಕೊಂಡು ಹೋಗುತ್ತಿದ್ದಾರೆ? ಎಂಬುದು ಕೂಡ ಆತನಿಗೆ ತಿಳಿಯಲಾರದ ವಯಸ್ಸು ಅದು.
ವಾಷಿಂಗ್ಟನ್‌ನ ಮಿನ್ನೇಸೋಟದಲ್ಲಿ ಪ್ರೀ ಸ್ಕೂಲ್ ಮುಗಿಸಿ ಮನೆಗೆ ಮರಳುತ್ತಿದ್ದ 5 ವರ್ಷದ ಬಾಲಕನನ್ನು ಕರೆದುಕೊಂಡು ಹೋದವರು ಬೇರೆ ಯಾರೂ ಅಲ್ಲ, ಅವರು ಐಸಿಇ (ಇಮಿಗ್ರೇಷನ್ ಅ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್) ಅಧಿಕಾರಿಗಳು.
ತಂದೆಯನ್ನು ಬಂಧಿಸುವ ಉದ್ದೇಶಕ್ಕೆ, 5 ವರ್ಷದ ಲಿಯಾಮ್ ಕೊನೆಜೊ ರಾಮೋಸ್ ಎಂಬ ಬಾಲಕನನ್ನು ಮಿನ್ನೇಸೋಟದಲ್ಲಿರುವ ಬಾಲಕನ ಮನೆಯ ಸಮೀಪವೇ ಇಮಿಗ್ರೇಷನ್ ಅ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸದ್ಯ, ಬಾಲಕ ಹಾಗೂ ಆತನ ತಂದೆಯನ್ನು ಟೆಕ್ಸಾಸ್‌ನಲ್ಲಿರುವ ಅಕ್ರಮ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿದೆ. ಘಟನೆಗೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.
ಕಮಲಾ ಹ್ಯಾರಿಸ್ ಆಕ್ರೋಶ
5 ವರ್ಷದ ಬಾಲಕನ ಬಂಧನಕ್ಕೆ ಸಂಬಂಧಿಸಿದಂತೆ ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಮಲಾ ಹ್ಯಾರಿಸ್ ‘ಲಿಯಾಮ್ ರಾಮೋಸ್ ಇನ್ನೂ ಚಿಕ್ಕ ಮಗು. ತನ್ನ ಕುಟುಂಬದೊಂದಿಗೆ ಮನೆಯಲ್ಲಿರಬೇಕಾದ ವಯಸ್ಸಿನಲ್ಲಿ ಆತನನ್ನು, ಐಸಿಇ ಅಧಿಕಾರಿಗಳು ಟೆಕ್ಸಾಸ್ ಬಂಧನ ಕೇಂದ್ರದಲ್ಲಿ ಇರಿಸಿರುವುದು ಆಘಾತಕಾರಿ. ಈ ಘಟನೆ ಕಂಡು ನನಗೆ ಕೋಪ ತಡೆಯಲಾಗುತ್ತಿಲ್ಲ. ನಿಮಗೂ ಕೋಪ ಬರಬೇಕು’ ಎಂದಿದ್ದಾರೆ.
ಆದರೆ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಾತ್ರ, ಐಸಿಇ ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಪೋಷಕರಾದ ಮಾತ್ರಕ್ಕೆ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಬಾಲಕನನ್ನು ಬಂಧಿಸಿದ್ದೇಕೆ?
ಬಾಲಕನ ತಂದೆ ಅಡ್ರಿಯನ್ ಅಲೆಕ್ಸಾಂಡರ್ ಕೊನೇಹೋ ಆರಿಯಾಸ್ ಅವರು ಈಕ್ವೆಡಾರ್ ಮೂಲದವರಾಗಿದ್ದಾರೆ. 2024ರಿಂದಲು ಅಮೆರಿಕಾದಲ್ಲಿ ಅಕ್ರಮವಾಗಿ ವಾಸವಾಗಿದ್ದಾರೆ. ಇಲ್ಲಿನ ಪೌರತ್ವ ಪಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಅದಾಗ್ಯೂ, ಅಲೆಕ್ಸಾಂಡರ್‌ನನ್ನು ಬಂಧಿಸಲು ಮುಂದಾದಾಗ, ಆತ ಮಗುವನ್ನು ಬಿಟ್ಟು ತಪ್ಪಿಸಿಕೊಂಡಿದ್ದಾನೆ. ಹಾಗಾಗಿ ಬಾಲಕ ಒಬ್ಬನನ್ನೇ ಬಿಟ್ಟುಬರಲು ಸಾಧ್ಯವಾಗದ್ದರಿಂದ ಆತನನ್ನೂ ವಶಕ್ಕೆ ಪಡೆಯಲಾಯಿತು ಎಂದು ಐಸಿಇ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.