ADVERTISEMENT

ಬಾಂಗ್ಲಾದಲ್ಲಿ ಭಾರಿ ಮಳೆ: ರೋಹಿಂಗ್ಯಾ ನಿರಾಶ್ರಿತರ ಹಲವು ಶಿಬಿರಗಳು ನಾಶ

ಏಜೆನ್ಸೀಸ್
Published 29 ಜುಲೈ 2021, 11:21 IST
Last Updated 29 ಜುಲೈ 2021, 11:21 IST
ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಅಲ್ಲಿನ ರೋಹಿಂಗ್ಯಾ ನಿರಾಶ್ರಿತರ ಹಲವು ಶಿಬಿರಗಳು ಪ್ರವಾಹಕ್ಕೆ ಸಿಲುಕಿವೆ –ಎಪಿ/ಪಿಟಿಐ ಚಿತ್ರ
ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಅಲ್ಲಿನ ರೋಹಿಂಗ್ಯಾ ನಿರಾಶ್ರಿತರ ಹಲವು ಶಿಬಿರಗಳು ಪ್ರವಾಹಕ್ಕೆ ಸಿಲುಕಿವೆ –ಎಪಿ/ಪಿಟಿಐ ಚಿತ್ರ   

ಢಾಕಾ: ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಇಲ್ಲಿನ ರೋಹಿಂಗ್ಯಾ ನಿರಾಶ್ರಿತರ ಹಲವು ಶಿಬಿರಗಳು ನಾಶಗೊಂಡಿದ್ದು, ಸಹಸ್ರಾರು ಮಂದಿಗೆ ಹತ್ತಿರದ ಇತರ ಶಿಬಿರಗಳಲ್ಲಿ ಹಾಗೂ ಸಮುದಾಯ ಭವನಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ.

ಕಾಕ್ಸ್‌ ಬಜಾರ್‌ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಸುಮಾರು 30 ಸೆಂ.ಮೀ ಮಳೆಯಾಗಿದೆ. ಈ ಜಿಲ್ಲೆಯಲ್ಲೇ ಸುಮಾರು 8 ಲಕ್ಷ ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿದೆ.

ಈ ಪ್ರದೇಶದಲ್ಲಿ ಜುಲೈ ತಿಂಗಳಲ್ಲಿ ಸುರಿಯುವ ಸರಾಸರಿ ಮಳೆಯ ಅರ್ಧದಷ್ಟು ಮಳೆ ಒಂದೇ ದಿನ ಸುರಿದಿದೆ. ಇನ್ನೂ ಕೆಲ ದಿನಗಳು ಮಳೆ ಬರುವ ಸಾಧ್ಯತೆ ಇದೆ. ಈ ವಾರದ ಆರಂಭದಲ್ಲಿ ಮಳೆ, ಪ್ರವಾಹ ಮತ್ತು ಭೂ ಕುಸಿತದಿಂದ ಶಿಬಿರಗಳಲ್ಲಿನ ಆರು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದು ಮಗುವೂ ಸೇರಿದೆ.

ADVERTISEMENT

ಭಾರಿ ಮಳೆಯಿಂದ 12 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ತೊಂದರೆ ಆಗಿದೆ. ಅಂದಾಜು 2,500 ತಾತ್ಕಾಲಿಕ ಮನೆಗಳುನಾಶವಾಗಿವೆ ಅಥವಾ ಹಾನಿಗೊಂಡಿವೆ. 5 ಸಾವಿರಕ್ಕೂ ಹೆಚ್ಚು ನಿರಾಶ್ರಿತರನ್ನು ಸಮೀಪದ ಇತರ ನಿರಾಶ್ರಿತರ ಶಿಬಿರಗಳಲ್ಲಿ ಅಥವಾ ಸಮುದಾಯ ಭವನಗಳಲ್ಲಿ ಉಳಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.