ADVERTISEMENT

ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ

ಏಜೆನ್ಸೀಸ್
Published 8 ಜುಲೈ 2022, 18:32 IST
Last Updated 8 ಜುಲೈ 2022, 18:32 IST
ಶಿಂಜೊ ಅಬೆ
ಶಿಂಜೊ ಅಬೆ   

ಕಶಿಹರ (ಜಪಾನ್‌): ಜಪಾನ್‌ನ ಮಾಜಿ ಪ್ರಧಾನಿ ಮತ್ತು ಅಲ್ಲಿನ ಅತ್ಯಂತ ಪ್ರಭಾವಿ ನಾಯಕ ಶಿಂಜೊ ಅಬೆ (67) ಅವರನ್ನು ಶುಕ್ರ
ವಾರ ಬೆಳಿಗ್ಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಚುನಾವಣಾ ಪ್ರಚಾರ ನಡೆಸುತ್ತಿದ್ದ ಅಬೆ ಅವರಿಗೆ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಲಾಗಿದೆ.

ಅಬೆ ಅವರು 2006ರಲ್ಲಿ ಒಂದು ವರ್ಷದ ಅವಧಿಗೆ ಮತ್ತು 2012ರಿಂದ 2020ರವರೆಗೆ ಪ್ರಧಾನಿಯಾಗಿದ್ದರು.ಅನಾರೋಗ್ಯದ ಕಾರಣದಿಂದ 2020ರಲ್ಲಿ ಅವರು ರಾಜೀನಾಮೆ ನೀಡಿದ್ದರು.

ಮೇಲ್ಮನೆಗೆ ಈ ವಾರದ ಕೊನೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ದೇಶದ ಪ‍ಶ್ಚಿಮ ಭಾಗದ ನಾರಾ ಎಂಬಲ್ಲಿ ಅಬೆ ಅವರು ಪ್ರಚಾರ ಮಾಡುತ್ತಿದ್ದಾಗ ಈ ಕೃತ್ಯ ನಡೆದಿದೆ. ಅಬೆ ಅವರ ಕುತ್ತಿಗೆಗೆಎರಡು ಗುಂಡು ತಗುಲಿವೆ. ಅತಿಯಾದ ರಕ್ತಸ್ರಾವವು ಅವರ ಸಾವಿಗೆ ಕಾರಣವಾಗಿದೆ.

ಗುಂಡು ತಗುಲಿದ ತಕ್ಷಣವೇ ಅವರನ್ನು ಹೆಲಿಕಾಪ್ಟರ್‌ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 20ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಅವರನ್ನು ಬದುಕಿಸಲು ಸುಮಾರು ಐದು ತಾಸು ಯತ್ನಿಸಿದರು. ಆದರೆ, ಈ ಪ್ರಯತ್ನ ಫಲ ನೀಡಲಿಲ್ಲ.

ಗುಂಡು ಹಾರಿಸಿದ್ದಾನೆ ಎಂದು ಹೇಳಲಾದ ವ್ಯಕ್ತಿಯನ್ನು ತೆತ್ಸುಯ ಯಮಾಗಾಮಿ (41) ಎಂದು ಗುರುತಿಸಲಾಗಿದೆ. ಈತ ಜಪಾನ್‌ ನೌಕಾಪಡೆಯ ಕರಾವಳಿ ರಕ್ಷಣಾ ಪಡೆಯಲ್ಲಿ ಇದ್ದ ಎಂದು ವರದಿಯಾಗಿದೆ. ನಾಡಬಂದೂಕು ಉಪಯೋಗಿಸಿ ಈ ಹತ್ಯೆ ನಡೆಸಲಾಗಿದೆ. ಗುಂಡು ಹಾರಿಸಿದ ಬಳಿಕ ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿಲ್ಲ. ರಕ್ಷಣಾ ಪಡೆ ಸಿಬ್ಬಂದಿಯು ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬಂಧಿಸಿದರು. ಅಬೆ ಅವರ ಬಗ್ಗೆ ತನಗೆ ಅತೃಪ‍್ತಿ ಇತ್ತು, ಕೊಲ್ಲುವ ಉದ್ದೇಶದಿಂದಲೇ ಗುಂಡು ಹಾರಿಸಿ
ದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಸಂಘಟನೆಯೊಂದರ ಬಗ್ಗೆ ಆರೋಪಿಗೆ ತೀವ್ರಅಸಮಾಧಾನ ಇದೆ. ಆ ಸಂಘಟನೆಯ ಜತೆಗೆ
ಅಬೆ ಅವರಿಗೆ ಸಂಪರ್ಕ ಇದೆ ಎಂದು ಆರೋಪಿ ನಂಬಿದ್ದ. ‘ಈ ಅಸಮಾಧಾನದ ಕಾರಣಕ್ಕಾಗಿಯೇ ಹತ್ಯೆ ಮಾಡಿದ್ದೇನೆ’ ಎಂದು ಆರೋಪಿ ಹೇಳಿದ್ದಾನೆ.

ಅತ್ಯಂತ ದೀರ್ಘಕಾಲ ಪ್ರಧಾನಿಯಾಗಿದ್ದ ಅಬೆ ಅವರ ಹತ್ಯೆಯು ದೇಶವನ್ನು ಆಘಾತಕ್ಕೆ ಕೆಡವಿದೆ ಮತ್ತು ಜಾಗತಿಕ ನಾಯಕರು ದಿಗ್ಭ್ರಮೆ, ಸಂತಾಪ ಮತ್ತು ಖಂಡನೆ ವ್ಯಕ್ತಪಡಿಸಿದ್ದಾರೆ.ಜಪಾನ್‌ನಲ್ಲಿ ಅತ್ಯಂತ ಕಟ್ಟುನಿಟ್ಟಿನ ಶಸ್ತ್ರಾಸ್ತ್ರ ನಿಯಮಗಳಿವೆ. ಅಲ್ಲದೆ, ಅಲ್ಲಿ ಅಪರಾಧದ ಪ್ರಮಾಣವೂ ಅತ್ಯಲ್ಪ. ಹೀಗಿದ್ದರೂ ಅಬೆ ಅವರ ಹತ್ಯೆ ಆಗಿರುವುದು ಆಘಾತಕ್ಕೆ ಕಾರಣವಾಗಿದೆ. ಈ ಹತ್ಯೆಯು ‘ಅನಾಗರಿಕ ಕೃತ್ಯ’ ಮತ್ತು ಇದನ್ನು ‘ಕ್ಷಮಿಸಲು ಸಾಧ್ಯವೇ ಇಲ್ಲ’ ಎಂದು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.