ADVERTISEMENT

ಬಹುಕೋಟಿ ಹಗರಣ: ಮಲೇಷ್ಯಾ ಮಾಜಿ ಪ್ರಧಾನಿ ನಜಿಬ್ ರಜಾಕ್‌ ಬಂಧನ

ಏಜೆನ್ಸೀಸ್
Published 3 ಜುಲೈ 2018, 13:06 IST
Last Updated 3 ಜುಲೈ 2018, 13:06 IST
ಮಲೇಷ್ಯಾ ಮಾಜಿ ಪ್ರಧಾನಿ ನಜಿಬ್ ರಜಾಕ್‌. ಚಿತ್ರ: ಎಎಫ್‌ಪಿ
ಮಲೇಷ್ಯಾ ಮಾಜಿ ಪ್ರಧಾನಿ ನಜಿಬ್ ರಜಾಕ್‌. ಚಿತ್ರ: ಎಎಫ್‌ಪಿ   

ಕ್ವಾಲಾಲಂಪುರ:ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಮಲೇಷ್ಯಾದ ಮಾಜಿ ಪ್ರಧಾನಿ ನಜಿಬ್‌ ರಜಾಕ್‌ ಅವರನ್ನು ದೇಶ ವಿರೋಧಿ ತಡೆ ಸಂಸ್ಥೆಯು ಕ್ವಾಲಾಲಂಪುರದಲ್ಲಿನ ತಮಾನ್‌ ಡುತ ಮನೆಯಿಂದ ಬಂಧಿಸಿದೆ.

ಪೊಲೀಸರು ಮಲೇಷ್ಯಾದ ಸ್ಥಳೀಯ ಕಾಲಮಾನ ಮಧ್ಯಾಹ್ನ 2.35ಕ್ಕೆ ಬಂಧಿಸಿದ್ದಾರೆ. ನಜೀಬ್‌ ರಜಾಕ್‌ ಅವರು ಮಲೇಷ್ಯಾದ ‘1ಎಂಡಿಬಿ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌’ನ ನೂರಾರು ಕೋಟಿ ದುರುಪಯೋಗ ಪಡಿಸಿಕೊಂಡ ಬಗ್ಗೆ ತನಿಖೆ ಎದುರಿಸುತ್ತಿದ್ದಾರೆ. ಆದರೆ, ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ನಜೀಬ್‌ ಅವರನ್ನು ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ‘1 ಎಂಡಿಬಿ’ ಹಗರಣ ಸಂಬಂಧ ರಚಿಸಲಾಗಿರುವ ವಿಶೇಷ ಕಾರ್ಯಪಡೆ(ಟಾಸ್ಕ್‌ ಫೋರ್ಸ್‌) ತನಿಖೆ ನಡೆಸಲು ಸಿದ್ಧತೆ ನಡೆಸಿದೆ ಎಂದು ನ್ಯೂಸ್‌ ಏಷ್ಯಾ ವಾಹಿನಿ ಸುದ್ದಿ ಪ್ರಸಾರ ಮಾಡಿರುವುದಾಗಿ ಎಎನ್‌ಐ ವರದಿ ಮಾಡಿದೆ.

ADVERTISEMENT

ದಾಳಿ ವೇಳೆ ಪೊಲೀಸರು ನಜೀಬ್‌ ಅವರ ಕುಟುಂಬಕ್ಕೆ ಸೇರಿದ ಅಪಾರ ನಗದು, ಐಷಾರಾಮಿ ವಸ್ತು ಮತ್ತು ಆಭರಣಗಳನ್ನು ಪತ್ತೆ ಮಾಡಿದ್ದಾರೆ.

ನಜೀಬ್‌ ರಜಾಕ್‌ ಮತ್ತು ಅವರ ಪತ್ನಿ ದೇಶ ಬಿಟ್ಟು ತೆರಳದಂತೆ ಮಲೇಷ್ಯಾದ ನೂತನ ಪ್ರಧಾನಿ ಮಹತಿರ್‌ ಮೊಹಮ್ಮದ್‌ ಅವರು ಮೇ ತಿಂಗಳಲ್ಲಿ ಆದೇಶ ಹೊರಡಿಸಿದ್ದರು. ತನಿಖೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಸುಳಿವು ಸಿಕ್ಕ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದರಿಂದಾಗಿ ನಜೀಬ್‌ ಕುಟುಂಬ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಮತ್ತೊಂದು ಸಂಕಷ್ಟಕ್ಕೆ ಸಿಲುಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.