ADVERTISEMENT

ನೇಪಾಳದಲ್ಲಿ ನವಾಜ್‌ ಷರೀಫ್‌–ನರೇಂದ್ರ ಮೋದಿ ರಹಸ್ಯ ಭೇಟಿ: ಇಮ್ರಾನ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2022, 16:27 IST
Last Updated 31 ಮಾರ್ಚ್ 2022, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ರಾಷ್ಟ್ರವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯುವ ಮುನ್ನ ಇಮ್ರಾನ್‌ ರಾಜೀನಾಮೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ರಾಜೀನಾಮೆ ನೀಡುವುದಿಲ್ಲ ಎಂದು ವಿಡಿಯೊ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪದಚ್ಯುತಿಗೊಳಿಸಲು ವಿದೇಶಗಳು ಪಿತೂರಿ ನಡೆಸುತ್ತಿರುವ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿರುವ ಅವರು, 'ಅವಿಶ್ವಾಸ ನಿರ್ಣಯದ ಮೇಲಿನ ಮತದಾನದಲ್ಲಿ ಇಮ್ರಾನ್‌ ಖಾನ್‌ ಸೋತರೆ, ಪಾಕಿಸ್ತಾನವನ್ನು ಕ್ಷಮಿಸಲಾಗುತ್ತದೆ. ಆದರೆ, ಒಂದು ಪಕ್ಷ ಇಮ್ರಾನ್‌ ಖಾನ್‌ ಗೆಲುವು ಸಾಧಿಸಿದರೆ, ಪಾಕಿಸ್ತಾನಕ್ಕೆ ಕೆಟ್ಟ ಕಾಲ ಶುರುವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಆ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಅಧಿಕೃತ ದಾಖಲೆಯನ್ನು ಕಳುಹಿಸಲಾಗಿದೆ. ಚುನಾಯಿತ ಪ್ರಧಾನಿಯ ವಿರುದ್ಧ ನಡೆದಿರುವ ವಿದೇಶದ ಪಿತೂರಿ ಇದಾಗಿದೆ..' ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿರುವ ಇಮ್ರಾನ್‌ ಖಾನ್‌, 'ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇಪಾಳದಲ್ಲಿ ಗುಟ್ಟಾಗಿ ಭೇಟಿಯಾಗುತ್ತಿದ್ದರು' ಎಂದಿದ್ದಾರೆ.

ADVERTISEMENT

ವಿದೇಶಿ ಶಕ್ತಿಗಳೊಂದಿಗೆ ಇಲ್ಲಿ ಮೂರು ಕೈಗೊಂಬೆಗಳು ಕಾರ್ಯಾಚರಿಸುತ್ತಿವೆ ಎಂದು ದೇಶದೊಳಗಿನ ಪಿತೂರಿಗಾರರ ಬಗ್ಗೆ ತಿಳಿದಿರುವುದಾಗಿ ಸುಳಿವು ನೀಡಿದ್ದಾರೆ.

ರಾಜೀನಾಮೆಯ ಬಗ್ಗೆ ಸ್ಪಷ್ಟಪಡಿಸಿರುವ ಅವರು, 'ಕೆಲವರು ರಾಜೀನಾಮೆ ನೀಡುವಂತೆ ನನಗೆ ಹೇಳಿದ್ದಾರೆ. ನಾನೇಕೆ ರಾಜೀನಾಮೆ ನೀಡಬೇಕು? ನಾನು 20 ವರ್ಷಗಳು ಕ್ರಿಕೆಟ್‌ ಆಡಿರುವೆ ಹಾಗೂ ಎಲ್ಲರಿಗೂ ತಿಳಿದಿದೆ, ನಾನು ಕೊನೆಯ ಎಸೆತದ ವರೆಗೂ ಹೋರಾಡುವೆ.... ' ಎಂದು ಹೇಳಿದ್ದಾರೆ.

'ಯಾರ ಮುಂದೆಯೂ ತಲೆ ಬಾಗಿಸುವುದಿಲ್ಲ ಹಾಗೂ ರಾಷ್ಟ್ರವನ್ನು ದಾಸ್ಯಕ್ಕೆ ಒಳಗಾಗಲು ಬಿಡುವುದಿಲ್ಲ. ಸ್ವತಂತ್ರವಾದ ವಿದೇಶಿ ನೀತಿಯ ಉದ್ದೇಶ ಹೊಂದಿರುವೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅಮೆರಿಕಕ್ಕೆ ಸಹಕಾರ ನೀಡಿದ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದ ರಾಷ್ಟ್ರ ಪಾಕಿಸ್ತಾನ. ನಾವು ಬಹಳಷ್ಟು ತ್ಯಾಗ ಮಾಡಿದ್ದೇವೆ, ಅದಕ್ಕೆ ಯಾವುದೇ ಮನ್ನಣೆ ಸಿಕ್ಕಿದೆಯೇ? ಅವರು ನನ್ನನ್ನು ತಾಲಿಬಾನ್‌ ಖಾನ್‌ ಎಂದು ಕರೆದರು' ಎಂದು ಇಮ್ರಾನ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.