ADVERTISEMENT

ನನ್ನ ಮನೆ ಮೇಲೆ ಎಫ್‌ಬಿಐ ಅಘೋಷಿತ ದಾಳಿ ಮಾಡಿದೆ: ಡೊನಾಲ್ಡ್ ಟ್ರಂಪ್ ಕಿಡಿ

ಪಿಟಿಐ
Published 9 ಆಗಸ್ಟ್ 2022, 2:50 IST
Last Updated 9 ಆಗಸ್ಟ್ 2022, 2:50 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಫ್ಲಾರಿಡಾದ ತನ್ನ ಮಾರ್-ಎ-ಲಾಗೊ ನಿವಾಸದ ಮೇಲೆ ದಾಳಿ ಮಾಡಿರುವ ಎಫ್‌ಬಿಐ ಏಜೆಂಟ್‌ಗಳು ಶೋಧ ನಡೆಸುತ್ತಿದ್ದಾರೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆರೋಪಿಸಿದ್ದಾರೆ.

ತನ್ನ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆಯಲಾಗಿದೆ. ತೃತೀಯ ಜಗತ್ತಿನದೇಶಗಳಲ್ಲಿ ಮಾತ್ರ ಇಂತಹ ದಾಳಿ ನಡೆಯುತ್ತದೆ ಎಂದು ಅವರು ಪ್ರತಿಪಾದಿಸಿದರು.

ಎಫ್‌ಬಿಐ, ಫ್ಲಾರಿಡಾದ ತನ್ನ ಮನೆಗೆ ಮುತ್ತಿಗೆ ಹಾಕಿದೆ ಎಂದು ಅವರು ಸುದೀರ್ಘ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ, ಫ್ಲಾರಿಡಾದ ಪಾಮ್ ಬೀಚ್‌ನಲ್ಲಿರುವ ನನ್ನ ಸುಂದರವಾದ ಮನೆ ಮಾರ್-ಎ-ಲಾಗೊ ಪ್ರಸ್ತುತ ಮುತ್ತಿಗೆಗೆ ಒಳಗಾಗಿದೆ. ದಾಳಿಗೆ ಒಳಪಟ್ಟಿದೆ ಮತ್ತು ಎಫ್‌ಬಿಐ ಏಜೆಂಟ್‌ಗಳ ದೊಡ್ಡ ಗುಂಪು ಆಕ್ರಮಿಸಿಕೊಂಡಿದೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ ಅಥವಾ ಅದು ಸೂಕ್ತ ಅಲ್ಲ’ ಎಂದು ಅವರು ಹೇಳಿದ್ದಾರೆ

ಟ್ರಂಪ್ ಅವರು 2020ರಲ್ಲಿ ಶ್ವೇತಭವನವನ್ನು ತೊರೆದ ನಂತರ, ತಮ್ಮ ಫ್ಲಾರಿಡಾ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ.

‘ಅವರು ನನ್ನ ಸುರಕ್ಷಿತ ನೆಲೆಯನ್ನು ಒಡೆದರು! ಡೆಮಾಕ್ರಟ್ ರಾಷ್ಟ್ರೀಯ ಸಮಿತಿಗೆ ನುಗ್ಗಿದ್ದ ವಾಟರ್‌ಗೇಟ್‌ ಪ್ರಕರಣಕ್ಕೂ ಇದಕ್ಕೂ ಏನು ವ್ಯತ್ಯಾಸ? ಇಲ್ಲಿ, ಡೆಮಾಕ್ರಾಟ್‌ಗಳು ಅಮೆರಿಕದ 45ನೇ ಅಧ್ಯಕ್ಷರ ಮನೆಗೆ ನುಗ್ಗಿದರು’ ಎಂದು ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಎಫ್‌ಬಿಐ ದಾಳಿ ನಡೆದಿದೆ.

‘ಇದು ಕಾನೂನು ಪಾಲಿಸಬೇಕಾದ ಸಂಸ್ಥೆಯೇ ಮಾಡಿರುವ ದುಷ್ಕೃತ್ಯ, 2024 ರಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಬಯಸದ ತೀವ್ರಗಾಮಿ ಎಡ ಡೆಮಾಕ್ರಾಟ್‌ಗಳ ದಾಳಿಯಾಗಿದೆ, ವಿಶೇಷವಾಗಿ ಇತ್ತೀಚಿನ, ಅಭಿಪ್ರಾಯಗಳ ಆಧಾರದ ಮೇಲೆ ರಿಪಬ್ಲಿಕನ್ನರು ಮತ್ತು ಕನ್ಸರ್ವೇಟಿವ್‌ಗಳನ್ನು ತಡೆಯಲು ಅವರು(ಡೆಮಾಕ್ರಟ್‌ಗಳು) ಏನು ಬೇಕಾದರೂ ಮಾಡುತ್ತಾರೆ’ಎಂದು ಟ್ರಂಪ್ ಹೇಳಿದರು.

ಇಂತಹ ಆಕ್ರಮಣವು ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಆರೋಪಿಸಿದರು.

‘ದುಃಖಕರ ಸಂಗತಿಯೆಂದರೆ, ಅಮೆರಿಕ ಸಹ ಈಗ ಆ ದೇಶಗಳಲ್ಲಿ ಒಂದಾಗಿದೆ, ಹಿಂದೆಂದೂ ನೋಡಿರದ ಮಟ್ಟದಲ್ಲಿ ಭ್ರಷ್ಟವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.

‘ಇದು ಉನ್ನತ ಮಟ್ಟದ ರಾಜಕೀಯ ಗುರಿಯಾಗಿದೆ!. ನಾನು ಗ್ರೇಟ್ ಅಮೆರಿಕನ್ ಜನರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ’ ಎಂದು ಗುಡುಗಿದ್ದಾರೆ.

2021ರ ಜನವರಿ 6ರಂದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ ಕ್ಯಾಪಿಟಲ್‌ ಹಿಲ್ಸ್‌ ದಾಳಿಗೆ ಸಂಬಂಧಿಸಿದಂತೆ ಬೆಂಬಲಿಗರನ್ನು ಪ್ರಚೋದಿಸಿದ ಆರೋಪದ ಮೇಲೆ ಟ್ರಂಪ್, ಮತ್ತೊಂದು ತನಿಖೆಯನ್ನು ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.