ವಿಶ್ವಸಂಸ್ಥೆ: ಫ್ರಾನ್ಸ್ ದೇಶವು ಪ್ಯಾಲೆಸ್ಟೀನ್‌ಗೆ ಅಧಿಕೃತವಾಗಿ ರಾಷ್ಟ್ರದ ಮಾನ್ಯತೆ ನೀಡುತ್ತದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಘೋಷಿಸಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಈ ಕುರಿತು ಘೋಷಣೆ ಮಾಡಿದರು. ಇದಕ್ಕೆ 140ಕ್ಕೂ ಹೆಚ್ಚು ನಾಯಕರು ಚಪ್ಪಾಳೆ ತಟ್ಟಿ ಬೆಂಬಲಿಸಿದರು.
‘ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಪ್ಯಾಲಿಸ್ಟೀನ್ ನಡುವೆ ಶಾಂತಿ ಇರಬೇಕು ಎಂಬುದನ್ನು ನನ್ನ ದೇಶ ಬಯಸುತ್ತದೆ. ಅದಕ್ಕಾಗಿ ಬದ್ಧತೆಯನ್ನೂ ವ್ಯಕ್ತಪಡಿಸುತ್ತದೆ. ಹೀಗಾಗಿಯೇ ಪ್ಯಾಲಿಸ್ಟೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸುತ್ತದೆ’ ಎಂದು ಅವರು ಘೋಷಿಸಿದರು.
ಮ್ಯಾಕ್ರಾನ್ ಅವರು ಈ ಕುರಿತು ಘೋಷಣೆ ಮಾಡಿದಾಗ ವಿಶ್ವಸಂಸ್ಥೆಯಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ರಿಯಾದ್ ಮನ್ಸೂರ್ ಸೇರಿದಂತೆ ಆ ದೇಶದ ನಿಯೋಗದವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಕ್ಯಾಮೆರಾ ವೀಕ್ಷಣೆಯಲ್ಲಿ ಚಪ್ಪಾಳೆ ತಟ್ಟಿದ್ದು ಕಂಡು ಬಂದಿತು.
ಫ್ರಾನ್ಸ್‌ನ ಹಾದಿಯಲ್ಲಿಯೇ ಇನ್ನೂ ಹಲವು ದೇಶಗಳು ಪ್ಯಾಲೆಸ್ಟೀನ್‌ಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ಅಮೆರಿಕ ಮತ್ತು ಇಸ್ರೇಲ್‌ನ ತೀವ್ರ ವಿರೋಧ ಇದೆ.
‘ಪ್ಯಾಲೆಸ್ಟೀನಿಯನ್ನರ ಹಕ್ಕು’:
‘ದೇಶದ ಮಾನ್ಯತೆ ಪಡೆಯುವುದು ಪ್ಯಾಲೆಸ್ಟೀನಿಯನ್ನರ ಹಕ್ಕಾಗಿದೆಯೇ ಹೊರತು ಬಹುಮಾನವಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಪ್ರತಿಪಾದಿಸಿದರು.
ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಪೋರ್ಚುಗಲ್‌ಗಳು ಪ್ಯಾಲೆಸ್ಟೀನ್ ಅನ್ನು ದೇಶವಾಗಿ ಗುರುತಿಸುವುದಾಗಿ ಭಾನುವಾರ ಹೇಳಿವೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯನ್ನು ಪ್ಯಾಲೆಸ್ಟೀನ್ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.