
ಜಾಕ್ ಲೆವ್ಯೂಗಲ್
ಪ್ಯಾರಿಸ್ (ಫ್ರಾನ್ಸ್): ಎಪ್‌ಸ್ಟೈನ್ ಪ್ರಕರಣ ಜಾಗತಿಕ ಮಾಧ್ಯಮಗಳ ಗಮನ ಸೆಳೆಯುತ್ತಿರುವ ಮಧ್ಯೆಯೇ, ಅಪ್ರಾಪ್ತರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮತ್ತೊಬ್ಬ ಫ್ರೆಂಚ್ ವ್ಯಕ್ತಿಯ ವಿರುದ್ಧದ ಪ್ರಕರಣಗಳು ಬೆಳಕಿಗೆ ಬಂದಿವೆ.
5 ದಶಕಗಳಿಂದ 9 ದೇಶಗಳಲ್ಲಿ ಸುಮಾರು 89 ಅಪ್ರಾಪ್ತರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಎರಡು ವರ್ಷಗಳ ಹಿಂದೆ ಜಾಕ್ ಲೆವ್ಯೂಗಲ್ (79) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ. ಈ 9 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ.
ಜಾಕ್ ಲೆವ್ಯೂಗಲ್ ಯಾರು?
1946ರಲ್ಲಿ ಫ್ರಾನ್ಸ್‌ನ ಆನೆಸಿ ನಗರದಲ್ಲಿ ಜನಿಸಿದ ಜಾಕ್ ಲೆವ್ಯೂಗಲ್ ವೃತ್ತಿಯಲ್ಲಿ ಶಿಕ್ಷಕ. 1960ರಿಂದ ಒಂಬತ್ತು ದೇಶಗಳಲ್ಲಿ 89 ಅಪ್ರಾಪ್ತರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಸಾಕ್ಷಿ ನೀಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದ್ದಾರೆ. ಈ ಅತ್ಯಾಚಾರ ಪ್ರಕರಣಗಳಿಗೂ ಮುನ್ನ ಅನಾರೋಗ್ಯದಲ್ಲಿದ್ದ ತಾಯಿ ಹಾಗೂ ವಯೋವೃದ್ಧ ಅತ್ತೆಯನ್ನು ಹತ್ಯೆ ಮಾಡಿರುವುದಾಗಿ ಲೆವ್ಯೂಗಲ್ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೆಂಟಲ್‌ಮನ್ ಬಾಯ್ ಲವರ್...
ಲೆವ್ಯೂಗಲ್ ತನ್ನನ್ನು ತಾನು ಜೆಂಟಲ್‌ಮನ್ ಬಾಯ್ ಲವರ್ ಎಂದು ಕರೆದುಕೊಳ್ಳುತ್ತಿದ್ದನು. 13 ರಿಂದ 17 ವರ್ಷದ ಬಾಲಕರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸುಮಾರು 150 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಇಬ್ಬರು ಮಾತ್ರ ದಾವೆ ಹೂಡಲು ಮುಂದಾಗಿದ್ದಾರೆ. ಇಲ್ಲಿಯವರೆಗೂ 89 ಸಂಸತ್ರಸ್ತರನ್ನು ಗುರುತಿಸಲಾಗಿದೆ ಎಂದು ಅಧಿಕಾರಿ ಮ್ಯಾಂಟೋ ತಿಳಿಸಿದ್ದಾರೆ.
1967ರಿಂದ 2022ರವರೆಗೆ ಭಾರತ, ಜರ್ಮನಿ, ಸ್ವಿಟ್ಜರ್‌ಲೇಂಡ್, ಮೊರಾಕ್ಕೊ, ನೈಜೀರಿಯಾ, ಅಲ್ಜೀರಿಯಾ, ಫಿಲಿಪ್ಪೀನ್ಸ್, ಕೊಲಂಬಿಯಾ, ಫ್ರಾನ್ಸ್, ನ್ಯೂ ಕ್ಯಾಲಿಡೋನಿಯಾ ಸೇರಿದಂತೆ ಒಂಬತ್ತು ದೇಶಗಳಲ್ಲಿ ಲೆವ್ಯೂಗಲ್ ಅತ್ಯಾಚಾರ ಕೃತ್ಯ ಎಸಗಿದ್ದಾನೆ.
ಯುಎಸ್‌ಬಿ ಡ್ರೈವ್ ಮೂಲಕ ಬಹಿರಂಗ...
ಲೆವ್ಯೂಗಲ್ ಸೋದರ ಸಂಬಂಧಿಯೊಬ್ಬರು ಅವರ ಯುಎಸ್‌ಬಿ ಡ್ರೈವ್ ಪರಿಶೀಲಿಸಿದ್ದಾರೆ. ಈ ವೇಳೆ ಲೆವ್ಯೂಗಲ್ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ 2022ರಲ್ಲಿ ಯುಎಸ್‌ಬಿ ಡ್ರೈವ್‌ಗಳನ್ನು ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದಾಗಿ 2 ವರ್ಷಗಳ ನಂತರ ಲೆವ್ಯೂಗಲ್ ಬಂಧಿಸಲಾಗಿದ್ದು ವಿಚಾರಣೆ ಮುಮದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.