ಸಾಂದರ್ಭಿಕ ಚಿತ್ರ
ಬಾಕು(ಅಜರ್‌ಬೈಜಾನ್): ಭೂಗೋಳದ ದಕ್ಷಿಣದ ದೇಶಗಳಿಗಾಗಿ ವಿಶ್ವಸಂಸ್ಥೆಯ ಹವಾಮಾನ ಸಮಾವೇಶವು ಘೋಷಿಸಿರುವ ವಾರ್ಷಿಕ ಅಂದಾಜು ₹25 ಸಾವಿರ ಕೋಟಿ (300 ಶತಕೋಟಿ ಡಾಲರ್) ಮೊತ್ತದ ‘ಹವಾಮಾನ ಹಣಕಾಸು ಪ್ಯಾಕೇಜ್’ ಅನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.
‘ಬಡ ದೇಶಗಳಿಗೆ ಅತ್ಯಲ್ಪ ಮೊತ್ತದ ಪ್ಯಾಕೇಜ್ ನೀಡಲಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದಯೇ, ಹವಾಮಾನ ಸಮಾವೇಶದ (ಸಿಒಪಿ29) ಅಧ್ಯಕ್ಷ ವಹಿಸಿರುವ ರಾಷ್ಟ್ರ ಹಾಗೂ ವಿಶ್ವಸಂಸ್ಥೆ ಈ ಪ್ಯಾಕೇಜ್ ಘೋಷಿಸಿವೆ’ ಎಂದು ಭಾರತ ಹೇಳಿದೆ.
ಹವಾಮಾನ ಸಮಾವೇಶದ ಅಂಗವಾಗಿ ನಡೆದ ಸರ್ವಸಾಧಾರಣ ಸಭೆಯಲ್ಲಿ, ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ ಚಾಂದಿನಿ ರೈನಾ ಅವರು ಈ ಮಾತು ಹೇಳಿದ್ದಾರೆ.
‘ಈ ಪ್ಯಾಕೇಜ್ ಅನ್ಯಾಯದಿಂದ ಕೂಡಿದೆ ಹಾಗೂ ತಮಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ಯಾಕೇಜ್ ಅಂಗೀಕರಿಸುವುದಕ್ಕೂ ಮೊದಲು ಈ ವಿಷಯವಾಗಿ ಮಾತನಾಡಬೇಕೆಂಬ ಭಾರತದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಈ ಘಟನೆಯಿಂದ ತೀವ್ರ ನಿರಾಸೆಯಾಗಿದೆ’ ಎಂದು ಹೇಳಿದ್ದಾರೆ.
ಭಾರತದ ವಾದವನ್ನು ಬೆಂಬಲಿಸಿ ಮಾತನಾಡಿದ ನೈಜೀರಿಯಾ ಪ್ರತಿನಿಧಿ, ‘300 ಶತಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿರುವುದು ತಮಾಷೆಯೇ ಸರಿ’ ಎಂದಿದ್ದಾರೆ. ಮಲಾವಿ ಮತ್ತು ಬೊಲಿವಿಯಾ ದೇಶಗಳು ಕೂಡ ಈ ವಿಚಾರವಾಗಿ ಭಾರತವನ್ನು ಬೆಂಬಲಿಸಿವೆ.
ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಎದುರಿಸುವುದಕ್ಕಾಗಿ 1.3 ಟ್ರಿಲಿಯನ್ ಡಾಲರ್ ನೀಡಬೇಕು ಎಂಬುದು ಭೌಗೋಳಿಕವಾಗಿ ದಕ್ಷಿಣದಲ್ಲಿರುವ ರಾಷ್ಟ್ರಗಳ ಬೇಡಿಕೆಯಾಗಿದೆ.
ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ತಮ್ಮ ಜವಾಬ್ಧಾರಿ ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಈ ಪ್ಯಾಕೇಜ್ ತೋರಿಸಿದೆಚಾಂದಿನಿ ರೈನಾ ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.