ADVERTISEMENT

ರಷ್ಯಾದಿಂದ ತೈಲ ಆಮದು ನಿಲ್ಲಿಸಲು ‘ಜಿ7’ ದೇಶಗಳು ಬದ್ಧವಾಗಿವೆ: ಅಮೆರಿಕ

ಏಜೆನ್ಸೀಸ್
Published 9 ಮೇ 2022, 2:37 IST
Last Updated 9 ಮೇ 2022, 2:37 IST
‘ಜಿ7’ ರಾಷ್ಟ್ರಗಳ ಮೂರನೇ ಸುತ್ತಿನ ಸಭೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾನುವಾರ ನೆರವೇರಿತು – ಎಎಫ್‌ಪಿ ಚಿತ್ರ
‘ಜಿ7’ ರಾಷ್ಟ್ರಗಳ ಮೂರನೇ ಸುತ್ತಿನ ಸಭೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾನುವಾರ ನೆರವೇರಿತು – ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸಲು ಮತ್ತು ಹಂತಹಂತವಾಗಿ ನಿಲ್ಲಿಸಲು ‘ಜಿ7’ ದೇಶಗಳು ಬದ್ಧವಾಗಿವೆ ಎಂದು ಅಮೆರಿಕ ಹೇಳಿದೆ.

‘ತೈಲ ಆಮದು ನಿಲ್ಲಿಸುವುದರಿಂದ ರಷ್ಯಾ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಯುದ್ಧಕ್ಕೆ ಅಗತ್ಯವಿರುವ ಆದಾಯಕ್ಕೂ ಹೊಡೆತ ಬೀಳಲಿದೆ’ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ‘ಜಿ7’ ಸದಸ್ಯರ ಪೈಕಿ ಯಾವುದೇ ದೇಶದ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ.

ರಷ್ಯಾ ವಿರುದ್ಧದ ನಿರ್ಬಂಧಗಳ ವಿಚಾರದಲ್ಲಿ ಪಾಶ್ಚಿಮಾತ್ಯ ದೇಶಗಳು ಸಮನ್ವಯ ಸಾಧಿಸಿವೆ. ಆದರೆ ರಷ್ಯಾದಿಂದ ಅನಿಲ ಮತ್ತು ತೈಲ ಆಮದಿನ ವಿಚಾರದಲ್ಲಿ ಅಷ್ಟೇ ತ್ವರಿತವಾಗಿ ಕ್ರಮ ಕೈಗೊಂಡಿಲ್ಲ.

ADVERTISEMENT

ರಷ್ಯಾದ ನೈಸರ್ಗಿಕ ಅನಿಲ ಹಾಗೂ ತೈಲದ ಪ್ರಮುಖ ಗ್ರಾಹಕವಲ್ಲದ ಅಮೆರಿಕವು ಈಗಾಗಲೇ ಆಮದಿನ ಮೇಲೆ ನಿಷೇಧ ಹೇರಿದೆ. ಆದರೆ, ರಷ್ಯಾ ತೈಲದ ಮೇಲೆ ಯುರೋಪ್ ಹೆಚ್ಚು ಅವಲಂಬಿತವಾಗಿದೆ. ರಷ್ಯಾದ ಅನಿಲ ಆಮದನ್ನು ಈ ವರ್ಷ ಮೂರನೇ ಎರಡರಷ್ಟು ಕಡಿತಗೊಳಿಸುವುದಾಗಿ ಯುರೋಪ್ ಒಕ್ಕೂಟ ಈಗಾಗಲೇ ಹೇಳಿದೆ. ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೆ ಜರ್ಮನಿ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರವಾಗಿ ‘ಜಿ7’ ರಾಷ್ಟ್ರಗಳ ನಡುವೆ ಭಾನುವಾರ ಬಿರುಸಿನ ಮಾತುಕತೆ ನಡೆದಿದೆ.

‘ಜಿ7’ (ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ) ರಾಷ್ಟ್ರಗಳ ಮೂರನೇ ಸುತ್ತಿನ ಸಭೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾನುವಾರ ನೆರವೇರಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಸಹ ಇದರಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.