ADVERTISEMENT

ಜಿ20: ಭಾರತದ ಅಧ್ಯಕ್ಷತೆಗೆ ಜಿ7 ಶೃಂಗದ ಬೆಂಬಲ

ಜಾಗತಿಕ ಸವಾಲು ಎದುರಿಸುವ ಭಾರತದ ಚಿಂತನೆ ಬೆಂಬಲಿಸಿ ಜಂಟಿ ಹೇಳಿಕೆ

ಪಿಟಿಐ
Published 13 ಡಿಸೆಂಬರ್ 2022, 12:25 IST
Last Updated 13 ಡಿಸೆಂಬರ್ 2022, 12:25 IST
ಜಿ20 ಶೃಂಗದ ಲಾಂಛನ.
ಜಿ20 ಶೃಂಗದ ಲಾಂಛನ.   

ವಾಷಿಂಗ್ಟನ್ :ಸಮಾನತೆಗೆ ವಿಶ್ವವನ್ನು ನಿರ್ಮಿಸುವ ಬದ್ಧತೆಯ ಜೊತೆಗೆ ಜಾಗತಿಕವಾದ ಪ್ರಮುಖ ಬಿಕ್ಕಟ್ಟು ಹಾಗೂ ಸವಾಲುಗಳನ್ನು ವ್ಯವಸ್ಥಿತವಾಗಿ ಎದುರಿಸಲು ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತವನ್ನು ಬೆಂಬಲಿಸಲು ಜಿ7 ಶೃಂಗದ ಸದಸ್ಯ ರಾಷ್ಟ್ರಗಳ ಮುಖಂಡರು ತೀರ್ಮಾನಿಸಿದ್ದಾರೆ.

ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಭಾರತ ಜಿ20 ಶೃಂಗದ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಜಿ20 ಸದಸ್ಯ ರಾಷ್ಟ್ರಗಳ ಮುಖಂಡರು, ಪ್ರತಿನಿಧಿಗಳ ಹಂತದ ಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್‌ 9 ಮತ್ತು 12ರಂದು ನಡೆಯಲಿದೆ.

ಜಿ7 ಶೃಂಗದ ಸದಸ್ಯ ರಾಷ್ಟ್ರಗಳ ಮುಖಂಡರು ಈ ಸಂಬಂಧ ಇಲ್ಲಿ ಜಂಟಿ ಹೇಳಿಕೆಯನ್ನು ನೀಡಿದ್ದು, ‘ಸರ್ವರಿಗೂ ಸುಸ್ಥಿರಾಭಿವೃದ್ಧಿ ಭವಿಷ್ಯ’ ದಕ್ಕಬೇಕು ಎಂಬ ಚಿಂತನೆಯನ್ನು ನಾವು ಬೆಂಬಲಿಸುತ್ತೇವೆ ಎಂದು ತಿಳಿಸಿದರು.

ADVERTISEMENT

‘ಜರ್ಮನಿಯ ಅಧ್ಯಕ್ಷತೆ ಇದ್ದಾಗಲೂ ಜಿ7 ಶೃಂಗದ ರಾಷ್ಟ್ರಗಳು ಆಗಿನ ಸಂದರ್ಭದಲ್ಲಿದ್ದ ಬಿಕ್ಕಟ್ಟು ಎದುರಿಸಲು ಬೆಂಬಲಿಸಿದ್ದವು. ನಮ್ಮ ಬದ್ಧತೆ ಮತ್ತು ಕಾರ್ಯಶೈಲಿಯು ಎಂದಿಗೂ ಸಮಾನತೆಯ ವಿಶ್ವ ಸಾಕಾರಗೊಳಿಸುವುದ ಕ್ಕೆಪೂರಕವಾಗಿರುತ್ತದೆ’ ಎಂದು ಮುಖಂಡರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಜಪಾನ್‌ನ ಅಧ್ಯಕ್ಷತೆಯಲ್ಲಿ ಹಿರೋಷಿಮಾದಲ್ಲಿ 2023ರಲ್ಲಿ ಜಿ7 ಶೃಂಗಸಭೆ ನಡೆಸಲು ಸಿದ್ಧತೆ ನಡೆದಿದೆ. ಇದೇ ಸಂದರ್ಭದಲ್ಲಿ ಭಾರತ ಅಧ್ಯಕ್ಷತೆಯಲ್ಲಿ ನಡೆಯುವ ಜಿ20 ಶೃಂಗಸಭೆಗೂ ಬೆಂಬಲವಾಗಿ ನಿಲ್ಲುತ್ತೇವೆ. ಶಾಂತಿಯುತ, ಅಭ್ಯುದಯ ಪೂರಕ ಮತ್ತು ಸುಸ್ಥಿರಾಭಿವೃದ್ಧಿ ಭವಿಷ್ಯ ಸರ್ವರಿಗೂ ನಿಲುಕಬೇಕಾದಿದೆ’ ಎಂದು ಹೇಳಿವೆ.

ಜಿ7 ಶೃಂಗವು ಅಮೆರಿಕ ಸೇರಿದಂತೆ ಏಳು ಪ್ರಮುಖ ರಾಷ್ಟ್ರಗಳು ಸದಸ್ಯರಾಗಿರುವ ಅಂತರರಾಷ್ಟ್ರೀಯ ರಾಜಕೀಯ ವೇದಿಕೆಯಾಗಿದೆ. ಹೆಚ್ಚುವರಿಯಾಗಿ ಐರೋಪ್ಯ ಒಕ್ಕೂಟ ಕೂಡಾ ಸೇರಿಕೊಂಡಿದೆ.

ಆಸ್ಟ್ರೇಲಿಯ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೊನೇಷ್ಯಾ, ಇಟಲಿ, ಜಪಾನ್‌, ಕೊರಿಯಾ ಗಣರಾಜ್ಯ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ.

ಸೋಮವಾರ ಸಭೆ ಸೇರಿದ್ದ ಜಿ7 ಶೃಂಗ ಸದಸ್ಯ ರಾಷ್ಟ್ರಗಳ ಮುಖಂಡರು ಜಾಗತಿಕ ಸವಾಲುಗಳನ್ನು ಎದುರಿಸಲು ವಹಿಸಬೇಕಾದ ಕ್ರಮಗಳನ್ನು ಕುರಿತು ಚರ್ಚಿಸಿದರು. ಈ ಶೃಂಗದ ನೂತನ ಸದಸ್ಯ ರಾಷ್ಟ್ರವಾಗಿ ಉಕ್ರೇನ್‌ ಸೇರಿಕೊಂಡಿದೆ.

‘ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ’ ಎಂಬ ಚಿಂತನೆಯನ್ನು ಸಾಕಾರಗೊಳಿಸಲು ಭಾರತ ಯತ್ನಿಸಲಿದೆ. –ಭಯೋತ್ಪಾದನೆ, ತಾಪಮಾನ ಬದಲಾವಣೆ, ಸೋಂಕು ನಿಯಂತ್ರಣ– ಒಗ್ಗೂಡಿ ಎದುರಿಸಬೇಕಾದ ಸವಾಲುಗಳು ಎಂದು ಪಟ್ಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.

ಜಿ20 ಶೃಂಗದ ಆದ್ಯತೆಗಳನ್ನು ಅಂತಿಮಗೊಳಿಸುವಾಗ ಸದಸ್ಯ ರಾಷ್ಟ್ರಗಳೇ ಅಲ್ಲದೆ, ಜಾಗತಿಕವಾಗಿ ಎಲ್ಲ ರಾಷ್ಟ್ರಗಳ ಸಲಹೆಗಳನ್ನು ಪರಿಗಣಿಸಲಾಗುವುದು. ಸೇರ್ಪಡೆಯುಕ್ತ, ಮಹಾತ್ವಾಕಾಂಕ್ಷೆಯ ಹಾಗೂ ಕಾರ್ಯಯೋತ್ಯ ಮತ್ತು ನಿರ್ದಿಷ್ಟವಾದ ಕಾರ್ಯಕ್ರಮಗಳು ಜಿ20 ಕಾರ್ಯಸೂಚಿಯಾಗಿರಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.