ADVERTISEMENT

ಬಿಳಿ ಕುದುರೆ ಏರಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್.. ನಿಗೂಢ ಸಂದೇಶ?

ಏಜೆನ್ಸೀಸ್
Published 3 ಫೆಬ್ರುವರಿ 2022, 11:43 IST
Last Updated 3 ಫೆಬ್ರುವರಿ 2022, 11:43 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಸಿಯೋಲ್: ಹೊಸ ಹೊಸ ಕ್ಷಿಪಣಿ ಪ್ರಯೋಗಗಳ ಮೂಲಕ ಜಗತ್ತನ್ನು ಬೆರಗಾಗಿಸುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೊಸ ಪ್ರಚಾರದ ವಿಡಿಯೊದಲ್ಲಿ ಬಿಳಿ ಕುದುರೆಯ ಮೇಲೆ ಏರಿ ಕಾಡಿನಲ್ಲಿ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

2017ರಿಂದ ತನ್ನ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯನ್ನು ಹಾರಿಸುವುದು ಸೇರಿದಂತೆ ದಾಖಲೆಯ ಏಳು ಶಸ್ತ್ರಾಸ್ತ್ರ ಪರೀಕ್ಷೆಗಳ ಪ್ರಯೋಗಗಳ ಮೂಲಕ ಉತ್ತರ ಕೊರಿಯಾವು ಈ ವರ್ಷವನ್ನು ಪ್ರಾರಂಭಿಸಿದೆ. ಈ ಮಧ್ಯೆ, ಕಿಮ್ ದೀರ್ಘ ಶ್ರೇಣಿಯ ಅಥವಾ ಪರಮಾಣು ಪರೀಕ್ಷೆಯನ್ನು ಮರುಪ್ರಾರಂಭಿಸಬಹುದು ಎಂಬ ಆತಂಕ ಹೆಚ್ಚಾಗಿದೆ.

ಆದರೆ, ಈ ವಾರ ಬಿಡುಗಡೆಯಾದ ಸರ್ಕಾರ ನಿರ್ಮಿಸಿದ ಸಾಕ್ಷ್ಯಚಿತ್ರವು ದೇಶದ ಜರ್ಜರಿತ ಆರ್ಥಿಕತೆಯನ್ನು ಸರಿಪಡಿಸಲು ಕಿಮ್‌ನ ಹೋರಾಟವನ್ನು ಎತ್ತಿ ತೋರಿಸುತ್ತದೆ. ಉತ್ತರ ಕೊರಿಯಾವು ಸದ್ಯ ಕೊರೊನಾ ವೈರಸ್ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳಿಂದಾಗಿ ವರ್ಷಗಳ ದಿಗ್ಬಂಧನದಿಂದ ತತ್ತರಿಸುತ್ತಿದೆ.

ADVERTISEMENT

‘ಸಾಕ್ಷ್ಯಚಿತ್ರದ ಪ್ರಮುಖ ವಿಷಯವೆಂದರೆ ಕಿಮ್ ಅವರ ಭಕ್ತಿ ಮತ್ತು ಜನರಿಗಾಗಿ ಕಠಿಣ ಪರಿಶ್ರಮ’ಎಂದು ವಾಷಿಂಗ್ಟನ್ ಮೂಲದ ಸ್ಟಿಮ್ಸನ್ ಸೆಂಟರ್‌ನ ರಾಚೆಲ್ ಮಿನ್‌ಯಂಗ್ ಲೀ ಎಎಫ್‌ಪಿಗೆ ತಿಳಿಸಿದ್ದಾರೆ.

ಕಿಮ್ ಕುಟುಂಬದ ರಾಜವಂಶದ ಆಳ್ವಿಕೆಯ ಪ್ರಮುಖ ಸಂಕೇತವಾದ ಬಿಳಿ ಕುದುರೆಯ ಮೇಲೆ ಕಿಮ್ ಸವಾರಿ ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.

‘ಕಿಮ್ ಕುದುರೆ ಏರಿರುವ ದೃಶ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ನಾನು ಭಾವಿಸುವುದಿಲ್ಲ. ಉತ್ತರ ಕೊರಿಯಾದ ಇತ್ತೀಚಿನ ಕ್ಷಿಪಣಿ ಉಡಾವಣೆಗಳು ಮತ್ತು ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷಾ ಯೋಜನೆಗಳಿಗೂ ಈ ವಿಡಿಯೊಗೆ ಸಂಬಂಧ ಇರಬಹುದು’ಎಂದು ಲೀ ಹೇಳಿದರು.

ಅಮೆರಿಕ ಜೊತೆಗೆ ಉತ್ತರ ಕೊರಿಯಾದ ಮಾತುಕತೆಗಳು ಸ್ಥಗಿತಗೊಂಡಿದ್ದು, ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆಗಳ ಹೆಚ್ಚಳ ಮತ್ತು ಹದಗೆಡುತ್ತಿರುವ ಹಸಿವಿನ ವರದಿಗಳ ಹೊರತಾಗಿಯೂ ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಕಿಮ್‌ನ ಆಶಯ ದ್ವಿಗುಣಗೊಂಡಿದೆ.

ಪ್ರಚಾರದ ಸಾಕ್ಷ್ಯಚಿತ್ರದಲ್ಲಿ 2021ರ ದೇಶದ ‘ಅತ್ಯಂತ ಕೆಟ್ಟ ಪರಿಸ್ಥಿತಿಯ’ಕೋಡೆಡ್ ಉಲ್ಲೇಖವನ್ನು ಮಾಡಲಾಗಿದೆ. ಈ ಸಂದರ್ಭವನ್ನು ವಿವರಿಸಲು ಸಾಂಕೇತಿಕವಾಗಿ ಕಿಮ್ ಎಚ್ಚರಿಕೆಯಿಂದ ಕುದುರೆಯನ್ನು ಮೆಟ್ಟಿಲುಗಳ ಕೆಳಗೆ ಇಳಿಸುತ್ತಿರುವ ದೃಶ್ಯ ಇದರಲ್ಲಿದೆ. ಜೊತೆಗೆ ಅಧ್ಯಕ್ಷರು ದೇಶಕ್ಕಾಗಿ ಹೇಗೆ ಜಾಗರೂಕತೆಯಿಂದ ಪರಿಶ್ರಮಪಡುತ್ತಿದ್ದಾರೆ ಎಂಬುದನ್ನು ಹಿನ್ನೆಲೆ ಧ್ವನಿಯಲ್ಲಿ ವಿವರಿಸಲಾಗಿದೆ.

‘ತಮ್ಮ ಜನರನ್ನು ತುಂಬಾ ಪ್ರೀತಿಸುವ ನಾಯಕ ಎಂದು ಕಿಮ್ ಅವರನ್ನು ಬಣ್ಣಿಸಲು ಪ್ರಯತ್ನಿಸಲಾಗಿದೆ’ಎಂದು ಯಾಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.