ಹಮಾಸ್– ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದ್ದರಿಂದ ಗಾಜಾದ ವಿವಿದ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಪ್ಯಾಲೆಸ್ಟೀನಿಯನ್ನರು ಶುಕ್ರವಾರ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು
ಎಎಫ್‌ಪಿ ಚಿತ್ರ
ನುಸ್ರತ್: ಕದನ ವಿರಾಮ ಘೋಷಣೆಯಾದ ಬಳಿಕ ಗಾಜಾಪಟ್ಟಿಯ ಕೆಲವು ಸ್ಥಳಗಳಿಂದ ಇಸ್ರೇಲ್‌ನ ಸೇನಾ ಪಡೆಗಳು ಶುಕ್ರವಾರ ಮರಳಲಾರಂಭಿಸಿದವು.
ಸೇನಾ ಸಿಬ್ಬಂದಿ ಗಾಜಾದಿಂದ ಹೊರಡುತ್ತಿದ್ದಂತೆ, ಯುದ್ಧ ಆರಂಭವಾದಾಗಿನಿಂದಲೂ ಆತಂಕದಿಂದ ತಮ್ಮ ನೆಲೆ ತೊರೆದು ವಲಸೆ ಹೋಗಿದ್ದ ಅಸಂಖ್ಯಾತ ಪ್ಯಾಲೆಸ್ಟೀನಿಯನ್ನರು ಮನೆಗಳಿಗೆ ಮರಳಿದರು.
ಕದನ ವಿರಾಮ ಒಪ್ಪಂದ ಜಾರಿಗಾಗಿ ಹಾಗೂ ಒತ್ತೆಯಾಳುಗಳನ್ನು ಹಿಂದಿರುಗಿಸುವ ಸಿದ್ಧತೆಗಾಗಿ ತನ್ನ ಪಡೆಗಳು ಗುಂಡಿನ ದಾಳಿಯನ್ನು ನಿಲ್ಲಿಸಿವೆ ಎಂದು ಇಸ್ರೇಲ್ ಸೇನೆ ಘೋಷಿಸಿದೆ.
‘ಇಸ್ರೇಲ್ ಪಡೆಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಗಾಜಾ ಹಾಗೂ ಖಾನ್ ಯೂನಿಸ್ ನಗರಗಳಿಂದ ಹೊರಹೋಗುತ್ತಿದ್ದು, ಪ್ಯಾಲೆಸ್ಟೀನಿಯನ್ನರು ಮನೆಗಳಿಗೆ ಮರಳಲು ಬಯಸುತ್ತಿದ್ದಾರೆ’ ಎಂದು ಗಾಜಾದ ನಾಗರಿಕ ರಕ್ಷಣಾ ಪಡೆ ತಿಳಿಸಿದೆ.
‘ಹಮಾಸ್ ಸಂಪೂರ್ಣ ಶಸ್ತ್ರ ತ್ಯಜಿಸುವ ವರೆಗೆ ಸೇನೆ ಠಿಕಾಣಿ’
ಕದನ ವಿರಾಮ ಜಾರಿಗೊಂಡಿದ್ದರೂ ಹಮಾಸ್ ಬಂಡುಕೋರರು ಸಂಪೂರ್ಣವಾಗಿ ಶಸ್ತ್ರತ್ಯಾಗ ಮಾಡುವವರೆಗೆ ಇಸ್ರೇಲ್ ಪಡೆಗಳು ಗಾಜಾದಲ್ಲಿ ಇರಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ‘ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿರುವವರ ಪೈಕಿ 20 ಜನರು ಜೀವಂತವಾಗಿದ್ದು 28 ಮಂದಿ ಮೃತಪಟ್ಟಿದ್ದಾರೆ. ಬರುವ ದಿನಗಳಲ್ಲಿ ಎಲ್ಲ ಒತ್ತೆಯಾಳುಗಳು ಮರಳುವರು’ ಎಂದೂ ಹೇಳಿದ್ದಾರೆ.
* ಐರೋಪ್ಯ ಒಕ್ಕೂಟ ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ವಿಶ್ವಸಂಸ್ಥೆಯ ಮಾನವೀಯ ನೆರವು ಸಂಸ್ಥೆ ಸೇರಿ ಹಲವು ಸಂಘಟನೆಗಳು ಪ್ಯಾಲೇಸ್ಟೀನಿಯನ್ನರಿಗೆ ನೆರವು ನೀಡಲು ಸಜ್ಜಾಗಿ ನಿಂತಿವೆ
* ಮಕ್ಕಳು ಮಹಿಳೆಯರು ಗೃಹ ಬಳಕೆ ಹಾಗೂ ಇತರ ವಸ್ತುಗಳಿರುವ ಚೀಲಗಳನ್ನು ಹೊತ್ತು ತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ
* ಗಾಜಾ ದಕ್ಷಿಣದಿಂದ ಉತ್ತರ ಭಾಗಕ್ಕೆ ಪ್ರಮುಖ ರಸ್ತೆಗಳ ಮೂಲಕ ಸಾಗಲು ಅನುವು ಮಾಡಿಕೊಡುವುದಾಗಿ ಇಸ್ರೇಲ್ ಸೇನೆ ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.