ADVERTISEMENT

ಗಾಜಾ ಮೇಲೆ ದಾಳಿ:ಸಂಘರ್ಷ ಅಂತ್ಯಕ್ಕೆ ಟ್ರಂಪ್ ಯೋಜನೆ ರೂಪಿಸಿದ್ದರೂ ನಿಲ್ಲದ ಆಕ್ರಮಣ

ಏಜೆನ್ಸೀಸ್
Published 5 ಅಕ್ಟೋಬರ್ 2025, 14:07 IST
Last Updated 5 ಅಕ್ಟೋಬರ್ 2025, 14:07 IST
   

ಕೈರೊ/ಜೆರುಸಲೇಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರೂಪಿಸಿರುವ ಯೋಜನೆಯಿಂದ ಯುದ್ಧ ಕೊನೆಯಾಗಿ ಶಾಂತಿ ನೆಲಸಲಿದೆ ಎಂದು ಪ್ಯಾಲೆಸ್ಟೀನಿಯನ್ನರು ವಿಶ್ವಾಸ ವ್ಯಕ್ತಪಡಿಸುತ್ತಿರುವ ನಡುವೆಯೇ, ಇಸ್ರೇಲ್ ಪಡೆಗಳು ಗಾಜಾ ಪಟ್ಟಿ ಮೇಲೆ ದಾಳಿ ನಡೆಸಿವೆ.

ಶನಿವಾರ ತಡರಾತ್ರಿ ಹಾಗೂ ಭಾನುವಾರ ಹಲವು ವಸತಿ ಕಟ್ಟಡಗಳನ್ನು ಗುರಿಯಾಗಿ ಇಸ್ರೇಲ್‌ ಪಡೆಗಳು ಯುದ್ಧವಿಮಾನ ಹಾಗೂ ಟ್ಯಾಂಕ್‌ಗಳನ್ನು ಬಳಸಿ ದಾಳಿ ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇಸ್ರೇಲ್‌ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟೀನ್‌ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಡ್ರೋನ್‌ಗಳ ಮೂಲಕ ಗ್ರೆನೇಡ್‌ಗಳನ್ನು ಬೀಳಿಸಲಾಗಿದ್ದು, ಅನೇಕ ಮನೆಗಳ ಚಾವಣಿಗಳು ಹಾರಿಹೋಗಿವೆ. ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ಸಬ್ರಾ ಹಾಗೂ ಶೇಖ್‌ ರದ್ವಾನ್ ಪ್ರದೇಶಗಳ ನಿವಾಸಿಗಳು ಹೇಳಿದ್ದಾರೆ.

ಇನ್ನೊಂದೆಡೆ, ಗಾಜಾದಲ್ಲಿನ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಎಲ್ಲ ಭಾಗೀದಾರರನ್ನು ಒಂದೆಡೆ ಸೇರಿಸಿ, ಮಾತುಕತೆಗೆ ವೇದಿಕೆ ಒದಗಿಸಲು ಈಜಿಪ್ಟ್‌ ಕೂಡ ಸಿದ್ಧತೆ ನಡೆಸುತ್ತಿದೆ. ಹಮಾಸ್‌, ಇಸ್ರೇಲ್, ಅಮೆರಿಕ ಹಾಗೂ ಕತಾರ್‌ ಪ್ರತಿನಿಧಿಗಳನ್ನು ಆಹ್ವಾನಿಸಿ, ಕದನ ವಿರಾಮ ಕುರಿತು ಚರ್ಚಿಸಲು ಪ್ರಯತ್ನಿಸುತ್ತಿದೆ. ಇಂತಹ ಪ್ರಯತ್ನಗಳ ನಡುವೆಯೇ ಈಗ ಇಸ್ರೇಲ್‌ ದಾಳಿಯನ್ನು ತೀವ್ರಗೊಳಿಸಿರುವುದು ಗಮನಾರ್ಹ.

ಡ್ರೋನ್‌ಗಳಿಂದ ಬಾಂಬ್‌ ಹಾಕಲಾಗುತ್ತಿದೆ ವಿವಿಧೆಡೆ ಸ್ಫೋಟಗಳು ಸಂಭವಿಸುತ್ತಿವೆ. ಟ್ರಂಪ್‌ ಎಲ್ಲಿದ್ದಾರೆ? ಅವರ ರೂಪಿಸಿರುವ ಕದನ ವಿರಾಮ ಎಲ್ಲಿದೆ?
ರಮಿ ಮೊಹಮ್ಮದ್‌ ಅಲಿ ಗಾಜಾ ನಿವಾಸಿ

ಇಕ್ಕಟ್ಟಿನಲ್ಲಿ ನೆತನ್ಯಾಹು

ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡುವುದಕ್ಕಾಗಿ ಡೊನಾಲ್ಡ್‌ ಟ್ರಂಪ್‌ ರೂಪಿಸಿರುವ ಯೋಜನೆಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಒಪ್ಪಿಗೆ ಸೂಚಿಸಿದ್ದರೂ ಯುದ್ಧ ನಿಲ್ಲಿಸುವ ಕುರಿತಂತೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ನೆತನ್ಯಾಹು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಮಾಸ್‌ ಒತ್ತೆಯಾಳಾಗಿ ಇರಿಸಿಕೊಂಡಿರುವವರ ಕುಟುಂಬಗಳು ಹಾಗೂ ಯುದ್ಧ ವಿರೋಧಿ ನಿಲುವು ಹೊಂದಿರುವ ಜನರು ಗಾಜಾ ಪಟ್ಟಿಯಲ್ಲಿನ ಯುದ್ಧ ನಿಲ್ಲಿಸುವಂತೆ ನೆತನ್ಯಾಹು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಹಮಾಸ್‌ನ ಕಟ್ಟಾ ವಿರೋಧಿ ನಾಯಕರು ಯಾವುದೇ ಕಾರಣಕ್ಕೂ ಯುದ್ಧ ನಿಲ್ಲಿಸದಂತೆ ಒತ್ತಾಯಿಸುತ್ತಿದ್ದಾರೆ. ‘ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು ದೊಡ್ಡ ಪ್ರಮಾದವಾಗಲಿದೆ’ ಎಂದು ಬಲಪಂಥೀಯ ನಾಯಕ ಹಾಗೂ ಹಣಕಾಸು ಸಚಿವ ಬೆಜಲೆಲ್‌ ಸ್ಮಾಟ್‌ರಿಚ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಒಂದು ವೇಳೆ ಹಮಾಸ್‌ ವಿರುದ್ಧದ ಯುದ್ಧವನ್ನು ನಿಲ್ಲಿಸಿದಲ್ಲಿ ನೆತನ್ಯಾಹು ನೇತೃತ್ವದ ಸರ್ಕಾರವನ್ನು ಉರುಳಿಸಲಾಗುವುದು’ ಎಂದು ಸ್ಮಾರ್‌ರಿಚ್‌ ಹಾಗೂ ಭದ್ರತಾ ಸಚಿವ ಇತಮಾರ್ ಬೆನ್‌–ಗಿವಿರ್ ಎಚ್ಚರಿಸಿದ್ದಾರೆ.

ಬಂಧಿತರ ಹಸ್ತಾಂತರಕ್ಕೆ ಸಿದ್ಧ: ಹಮಾಸ್

ಇಸ್ರೇಲ್‌ ಜತೆಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡು ತತ್‌ಕ್ಷಣದಿಂದಲೇ ಕೈದಿಗಳ ಹಸ್ತಾಂತರಕ್ಕೂ ಸಿದ್ಧ ಎಂದು ಹಮಾಸ್‌ ತಿಳಿಸಿದೆ. ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಹಮಾಸ್‌ ಹಾಗೂ ಇಸ್ರೇಲ್‌ನ ಸಮಾಲೋಚನಕಾರರು ಈಜಿಪ್ಟ್‌ನಲ್ಲಿ ಮಾತುಕತೆ ನಡೆಸಲು ತೆರಳಿರುವಂತೆಯೇ ಹಮಾಸ್‌  ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಮಾಸ್‌ ಹಾಗೂ ಇಸ್ರೇಲ್‌ ನಡುವೆ ಶಾಂತಿ ಸ್ಥಾಪಿಸಲು ಶಾಂತಿ ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ಅದನ್ನು ಹಮಾಸ್‌ ನಾಯಕರು ಒಪ್ಪಿದ ಬಳಿಕವೇ ಈಜಿಪ್ಟ್‌ನಲ್ಲಿ ಮಾತುಕತೆ ಏರ್ಪಡಿಸಲಾಗಿದೆ. ಹೀಗಾಗಿ ನಿಯಮಬದ್ಧವಾಗಿ ಇಸ್ರೇಲ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಹಮಾಸ್‌ ನಾಯಕರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.