
ರಷ್ಯಾ ಅಧ್ಯಕ್ಷನ ವ್ಲಾಡಿಮಿರ್ ಪುಟಿನ್ .
ಮಾಸ್ಕೊ: ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ಮಧ್ಯದ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಪ್ರಸ್ತಾವಿತ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಅನ್ವಯ ರೂಪಿಸಲಾಗಿರುವ ‘ಗಾಜಾ ಶಾಂತಿ ಮಂಡಳಿ’ ಸೇರಲು ರಷ್ಯಾಕ್ಕೆ ಅಮೆರಿಕವು ಸೋಮವಾರ ಆಮಂತ್ರಣ ನೀಡಿದೆ.
‘ಶಾಂತಿ ಮಂಡಳಿಯನ್ನು ಸೇರಿಕೊಳ್ಳುವಂತೆ ವ್ಲಾದಿಮಿರ್ ಪುಟಿನ್ ಅವರಿಗೆ ಆಮಂತ್ರಣ ಬಂದಿದೆ. ಇದರಲ್ಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು. ಆ ಬಳಿಕ ಅಮೆರಿಕದೊಂದಿಗೆ ಮಾತುಕತೆ ನಡೆಸಿ, ಸ್ಪಷ್ಟತೆ ಪಡೆದುಕೊಳ್ಳಲಾಗುವುದು’ ಎಂದು ರಷ್ಯಾ ಪ್ರತಿಕ್ರಿಯಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರನ್ನೂ ಅಮೆರಿಕ ಆಹ್ವಾನಿಸಿದೆ. ‘ಈ ಮಂಡಳಿಯ ಮೂಲಕ ವಿಶ್ವ ಸಂಸ್ಥೆಗಿಂತಲೂ ವಿಶಾಲ ವ್ಯಾಪ್ತಿ ಹೊಂದಿರುವ ಅಂತರರಾಷ್ಟ್ರೀಯ ಸಂಸ್ಥೆಯೊಂದನ್ನು ಹುಟ್ಟುಹಾಕಲು ಅಮೆರಿಕ ಯತ್ನಿಸುತ್ತಿದೆ’ ಎಂದು ರಷ್ಯಾದ ಸುದ್ದಿ ವಾಹಿನಿಯೊಂದು ವಿಶ್ಲೇಷಿಸಿದೆ.
ಈ ಮಂಡಳಿಯು ಗಾಜಾದಲ್ಲಿ ಸ್ಥಿರತೆ ತರುವ ಉದ್ದೇಶ ಹೊಂದಿದ್ದರೂ, ಜಗತ್ತಿನ ಇತರ ಸಂಘರ್ಷ ನಿಲ್ಲಿಸುವಲ್ಲಿಯೂ ಈ ಮಂಡಳಿ ಕಾರ್ಯನಿರ್ವಹಿಸಲಿದೆ ಎನ್ನುವಂತೆ ಅಮೆರಿಕವು ಬಿಂಬಿಸುತ್ತಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.