ಲಂಡನ್: ಲಂಡನ್‌ನ ಸಂಸ್ಥೆಯೊಂದು ನೀಡುವ ₹88 ಲಕ್ಷ ನಗದು ಹೊಂದಿರುವ ‘ಗ್ಲೋಬಲ್ ಸ್ಟೂಡೆಂಟ್ ಪ್ರೈಜ್–2025’ಕ್ಕೆ ಬಿಹಾರದ ವಿದ್ಯಾರ್ಥಿಯೊಬ್ಬರು ಭಾಜನರಾಗಿದ್ದಾರೆ.
ನಾಮನಿರ್ದೇಶನ ಮತ್ತು ಅರ್ಜಿ ಸಲ್ಲಿಕೆಯ ಮೂಲಕ 148 ದೇಶಗಳ ಒಟ್ಟು 11 ಸಾವಿರ ಮಂದಿ ಈ ಪುರಸ್ಕಾರಕ್ಕಾಗಿ ಪೈಪೋಟಿ ನೀಡಿದ್ದರು. ಕಲಿಕೆಯಲ್ಲಿನ ಸಾಧನೆ ಮತ್ತು ಸಮಾಜಮುಖಿ ಕೆಲಸ ಮಾಡಿದ್ದಕ್ಕಾಗಿ ಬಿಹಾರದ ಬಡಕುಟುಂಬದ ಆದರ್ಶ್‌ಗೆ(18 ವರ್ಷ) ಛೆಗ್ ಸಂಸ್ಥೆಯು ಬುಧವಾರ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ನೀಡಿದೆ.
ಚಿಕ್ಕವಯಸ್ಸಿನಲ್ಲಿಯೇ ಕೋಡಿಂಗ್ ಮತ್ತು ಸ್ಟಾರ್ಟಪ್ ಇಕೋಸಿಸ್ಟಮ್ ಬಗ್ಗೆ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ಆದರ್ಶ್ ತಿಳಿದುಕೊಂಡಿದ್ದರು. ಅವರ ತಾಯಿ ತಾವು ಮನೆಗೆಲಸ ಮಾಡಿ ಕೂಡಿಟ್ಟಿದ್ದ ಹಣದಲ್ಲಿ ಮಗನಿಗೆ ಲ್ಯಾಪ್‌ಟಾಪ್ ಕೊಡಿಸಿದ್ದರು.
ಎಂಟನೇ ತರಗತಿಯಲ್ಲಿರುವಾಗಲೇ ತಮ್ಮ ಪ್ರಥಮ ಪ್ರಯತ್ನದಲ್ಲಿ ಆದರ್ಶ್ ವಿಫಲರಾಗಿದ್ದರು. ಆದರೆ, ಆ ಬಳಿಕ ಅವರು ಅಭಿವೃದ್ಧಿಪಡಿಸಿದ ‘ಮಿಷನ್ ಬದ್ಲಾವೋ’ದಿಂದಾಗಿ 1300 ಜನರು ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಯಿತು.
ಆದರ್ಶ್ ಅವರು ಅಭಿವೃದ್ಧಿಪಡಿಸಿದ ಆನ್‌ಲೈನ್ ವೇದಿಕೆಯು 20 ಸಾವಿರಕ್ಕೂ ಅಧಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಿದ್ದು, ಅವರು ವಿದ್ಯಾರ್ಥಿವೇತನ, ಉದ್ಯಮ ಮಾರ್ಗದರ್ಶನ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.