ADVERTISEMENT

ಇಮ್ರಾನ್‌ಗೆ ಭಾರತ ಅಷ್ಟು ಇಷ್ಟವಾಗಿದ್ದರೆ ಅಲ್ಲಿಗೇ ಹೋಗಲಿ: ಮರ್ಯಮ್‌ ನವಾಜ್‌ 

ಪಿಟಿಐ
Published 9 ಏಪ್ರಿಲ್ 2022, 18:59 IST
Last Updated 9 ಏಪ್ರಿಲ್ 2022, 18:59 IST
   

ಇಸ್ಲಾಮಾಬಾದ್‌: ಭಾರತವನ್ನು ಬಹುವಾಗಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ವಿರೋಧ ಪಕ್ಷ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಉಪಾಧ್ಯಕ್ಷೆ ಮರಿಯಂ ನವಾಜ್‌ ಹರಿಹಾಯ್ದಿದ್ದಾರೆ. ಭಾರತವು ಇಮ್ರಾನ್‌ಗೆ ಅಷ್ಟೊಂದು ಇಷ್ಟ ಎಂದಾದರೆ ಅವರು ಅಲ್ಲಿಗೇ ಹೋಗಲಿ ಎಂದಿದ್ದಾರೆ.‘ಇಮ್ರಾನ್‌ಗೆ ತಲೆ ಸರಿ ಇಲ್ಲ’ ಎಂದೂ ಹೇಳಿದ್ದಾರೆ.

ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಭಾರತದ ಯಾವ ಪ್ರಧಾನಿಯೂ ಸಂವಿಧಾನವನ್ನು ಉಲ್ಲಂಘಿಸಿದ ಉದಾಹರಣೆ ಇಲ್ಲ. ಇದನ್ನು ಇಮ್ರಾನ್‌ ಅವರೂ ಅನುಸರಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಮಗಳು ಮರಿಯಂ ಹೇಳಿದ್ದಾರೆ.

‘ಅತ್ಯಂತ ಹೆಮ್ಮೆಯ ಭಾವವನ್ನು ಹೊಂದಿರುವ ದೇಶ ಭಾರತ’ ಎಂದು ಇಮ್ರಾನ್‌ ಹೇಳಿದ್ದಾರೆ. ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಇಮ್ರಾನ್‌ ಅವರು ಶುಕ್ರವಾರ ಮಾತನಾಡಿದ್ದರು. ತಾವು ಭಾರತ ವಿರೋಧಿ ಅಲ್ಲ ಮತ್ತು ಭಾರತದಲ್ಲಿ ತಮಗೆ ದೊಡ್ಡ ಸಂಖ್ಯೆಯ
ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದರು.

ADVERTISEMENT

‘ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಳ್ಳುವಂತೆ ಆ ದೇಶವನ್ನು ಯಾವುದೇ ಸೂಪರ್‌ ಪವರ್ ಕೂಡ ಬಲವಂತ ಮಾಡಲು ಸಾಧ್ಯವಿಲ್ಲ. ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಲಾಗಿದ್ದರೂ ಭಾರತವು ಆ ದೇಶದಿಂದ ತೈಲ ಖರೀದಿ ಮಾಡುತ್ತಿದೆ. ಸಾರ್ವಭೌಮ ದೇಶವಾಗಿರುವ ಭಾರತವು ಹೀಗೆಯೇ ಮಾಡಬೇಕು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಎರಡೂ ದೇಶಗಳು (ಭಾರತ ಮತ್ತು ಪಾಕಿಸ್ತಾನ) ಒಂದೇ ಬಾರಿ ಸ್ವಾತಂತ್ರ್ಯ ಪಡೆದುಕೊಂಡವು. ಐರೋಪ್ಯ ಒಕ್ಕೂಟದ ರಾಯಭಾರಿಗಳು ಇಲ್ಲಿ ಹೇಳಿದ್ದನ್ನು ಭಾರತದಲ್ಲಿ ಹೇಳಲು ಸಾಧ್ಯವೇ?’ ಎಂದು ಇಮ್ರಾನ್‌ ಹೇಳಿದ್ದಾರೆ.

‘ಇಮ್ರಾನ್‌ ಅವರು ಭಾರತವನ್ನು ಹೊಗಳುತ್ತಿದ್ದಾರೆ. ಅವರು ಅವಿಶ್ವಾಸ ನಿರ್ಣಯದ ವಿಚಾರದಲ್ಲಿಭಾರತವನ್ನು ಅನುಸರಿಸಬೇಕು. ಭಾರತದಲ್ಲಿ ವಿವಿಧ ಪ್ರಧಾನಿಗಳ ವಿರುದ್ಧ 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಆಗಿದೆ. ಆದರೆ, ಇಮ್ರಾನ್‌ ಅವರಂತೆ ಯಾರೊಬ್ಬರೂ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನೈತಿಕತೆಯ ಜತೆಗೆ ಆಟ ಆಡಿಲ್ಲ. ವಾಜಪೇಯಿ ಅವರು ಒಂದು ಮತದಿಂದ ವಿಶ್ವಾಸಮತ ಸೋತರು. ಅವರು ಸುಮ್ಮನೆ ಮನೆಗೆ ಹೋದರೇ ಹೊರತು ಇಮ್ರಾನ್‌ ಅವರಂತೆ ಸಂವಿಧಾನ ಮತ್ತು ದೇಶವನ್ನು ಒತ್ತೆಯಾಗಿ ಇರಿಸಿಕೊಳ್ಳಲಿಲ್ಲ’ ಎಂದು ಮರಿಯಂ ಹೇಳಿದ್ದಾರೆ.

‘ತಲೆ ಸರಿ ಇಲ್ಲದ ವ್ಯಕ್ತಿಯು ಇಡೀ ದೇಶವನ್ನು ಧ್ವಂಸ ಮಾಡಲು ಅವಕಾಶ ಕೊಡಬಾರದು. ಅವರನ್ನು (ಇಮ್ರಾನ್‌) ಪ್ರಧಾನಿ ಅಥವಾ ಮಾಜಿ ಪ್ರಧಾನಿ ಎಂದೂ ಪರಿಗಣಿಸಬಾರದು. ತಮ್ಮ ಮುಖ ರಕ್ಷಿಸಿಕೊಳ್ಳಲು ಇಡೀ ದೇಶವನ್ನು ಒತ್ತೆ ಇರಿಸಿಕೊಂಡಿರುವ ಅವರನ್ನು ಹುಚ್ಚ ಎಂದು ಮಾತ್ರ ಪರಿಗಣಿಸಬೇಕು’ ಎಂದು ಅವರು ಹೇಳಿದ್ದಾರೆ.

ಇಮ್ರಾನ್‌ ಅವರು ಭಾರತವನ್ನು ಹೊಗಳಿದ್ದು ಇದೇ ಮೊದಲೇನೂ ಅಲ್ಲ. ಸ್ವತಂತ್ರ ವಿದೇಶ ನೀತಿಯನ್ನು ಭಾರತ ಹೊಂದಿದೆ ಎಂದು ಕಳೆದ ವಾರ ಅವರು ಹೇಳಿದ್ದರು. ‘ತಮ್ಮ ಜನರನ್ನು ಕೇಂದ್ರೀಕರಿಸಿಕೊಂಡಿರುವ ವಿದೇಶಾಂಗ ನೀತಿಯನ್ನು ಭಾರತ ಹೊಂದಿದೆ’ ಎಂದು ಹೇಳಿದ್ದರು.

ಇಮ್ರಾನ್‌ ಭವಿಷ್ಯ ಇಂದು ನಿರ್ಧಾರ

ಪಾಕಿಸ್ತಾನದ ಸಂಸತ್ತು 'ನ್ಯಾಷನಲ್‌ ಅಸೆಂಬ್ಲಿ'ಯನ್ನು ವಿಸರ್ಜನೆ ಮಾಡಿದ್ದು ಅಸಾಂವಿಧಾನಿಕ ಎಂದು ಹೇಳಿರುವ ಪಾಕ್‌ ಸುಪ್ರೀಂ ಕೋರ್ಟ್‌, ಸಂಸತ್ತನ್ನು ಮರು ಸ್ಥಾಪಿಸಿದೆ. ಅಲ್ಲದೇ, ಪ್ರಧಾನಿ ಇಮ್ರಾನ್‌ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಇಂದು ಮತಕ್ಕೆ ಹಾಕಲು ಸೂಚಿಸಿದೆ. ಇದರೊಂದಿಗೆ ಇಮ್ರಾನ್‌ ಅವರ ಭವಿಷ್ಯ ಇಂದು ನಿರ್ಧಾರಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.