ADVERTISEMENT

ಸ್ಯಾನ್ ಡಿಯಾಗೋ ಮೃಗಾಲಯದ ಗೊರಿಲ್ಲಾಗಳಿಗೆ ಕೋವಿಡ್ ಪಾಸಿಟಿವ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 9:12 IST
Last Updated 12 ಜನವರಿ 2021, 9:12 IST
ಸ್ಯಾನ್ ಡಿಯಾಗೋ ಮೃಗಾಲಯದಲ್ಲಿರುವ ಗೊರಿಲ್ಲಾಗಳು: ರಾಯಿಟರ್ಸ್ ಚಿತ್ರ
ಸ್ಯಾನ್ ಡಿಯಾಗೋ ಮೃಗಾಲಯದಲ್ಲಿರುವ ಗೊರಿಲ್ಲಾಗಳು: ರಾಯಿಟರ್ಸ್ ಚಿತ್ರ   

ಸ್ಯಾನ್ ಡಿಯಾಗೋ: ಇಷ್ಟು ದಿನ ಮನುಷ್ಯರನ್ನು ಕಾಡುತ್ತಿದ್ದ ಕೊರೊನಾ ವೈರಸ್ ಇದೀಗ ಪ್ರಾಣಿಗಳನ್ನೂ ಕಾಡಲು ಆರಂಭಿಸಿದೆ. ಸ್ಯಾನ್ ಡಿಯಾಗೋಮೃಗಾಲಯದ ಸಫಾರಿ ಪಾರ್ಕ್‌ನ ಹಲವು ಗೊರಿಲ್ಲಾಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ವಾನರ ಪ್ರಭೇದದಲ್ಲಿ ಸೋಂಕು ಕಂಡು ಬಂದಿದೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.

ರೋಗಲಕ್ಷಣವಿಲ್ಲದ ಮೃಗಾಲಯದ ಸಿಬ್ಬಂದಿಯಿಂದ ಗೊರಿಲ್ಲಾಗಳಿಗೆ ಸೋಂಕು ಹರಡಿದೆ ಎಂದು ಮೃಗಾಲಯದ ಅಧಿಕಾರಿಗಳು ನಂಬಿದ್ದಾರೆ. ಪ್ರಾಣಿಗಳ ಬಳಿ ತೆರಳುವಾಗ ವೈಯಕ್ತಿಕ ರಕ್ಷಣಾ ಕಿಟ್ ಸೇರಿದಂತೆ ಎಲ್ಲ ಮುಂಜಾಗ್ರತೆ ವಹಿಸಲಾಗಿತ್ತು ಎಂದು ಅವರು ಹೇಳುತ್ತಾರೆ.

ಸೋಂಕಿಗೆ ಒಳಗಾಗಿರುವ ಎಂಟು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳ ಆರೋಗ್ಯವನ್ನು ಪಶುವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೋಂಕಿತ ಪ್ರಾಣಿಗಳು ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

"ಶೀತ ಮತ್ತು ಕೆಮ್ಮಿನ ಹೊರತಾಗಿ, ಗೊರಿಲ್ಲಾಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ" ಎಂದು ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಲಿಸಾ ಪೀಟರ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೂರು ಪ್ರಾಣಿಗಳಲ್ಲಿ ಮಾತ್ರ ಕೆಮ್ಮುವಿಕೆಯಂತಹ ಲಕ್ಷಣ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗೊರಿಲ್ಲಾ ಪ್ರಾಣಿಗಳು ಒಟ್ಟಿಗೆ ವಾಸಿಸುತ್ತಿರುವುದರಿಂದ ಗುಂಪಿನ ಎಲ್ಲ ಪ್ರಾಣಿಗಳಿಗೂ ಹಬ್ಬಿರುವ ಸಾಧ್ಯತೆ ಇದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಮಧ್ಯ ಆಫ್ರಿಕಾದಲ್ಲಿ ಕಂಡುಬರುವ ಈ ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳ ಸಂಖ್ಯೆ ಕಳೆದ ಎರಡು ದಶಕಗಳಲ್ಲಿ 60% ಕ್ಕಿಂತಲೂ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.