ADVERTISEMENT

ಮೌಂಟ್‌ ಎವರೆಸ್ಟ್‌: 100 ಮಂದಿಗೆ ಕೋವಿಡ್‌’

ನೇಪಾಳದ ಅಧಿಕಾರಿಗಳ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2021, 7:06 IST
Last Updated 23 ಮೇ 2021, 7:06 IST
ಮೌಂಟ್‌ ಎವರೆಸ್ಟ್‌
ಮೌಂಟ್‌ ಎವರೆಸ್ಟ್‌   

ಕಠ್ಮಂಡು: ‘ವಿಶ್ವದ ಅತಿ ಎತ್ತರದ ಪವರ್ತವಾದ ಮೌಂಟ್‌ ಎವರೆಸ್ಟ್‌ನಲ್ಲಿ ಸುಮಾರು 100 ಪರ್ವತಾರೋಹಿಗಳು ಮತ್ತು ಸಿಬ್ಬಂದಿಗೆ ಕೋವಿಡ್‌ ಸೋಂಕು ತಗುಲಿದೆ’ ಎಂದು ಪರ್ವತಾರೋಹಣದ ಗೈಡ್‌ವೊಬ್ಬರು ತಿಳಿಸಿದ್ದಾರೆ. ಆದರೆ, ನೇಪಾಳದ ಅಧಿಕಾರಿಗಳು ಈ ವರದಿಯನ್ನು ಅಲ್ಲಗೆಳೆದಿದ್ದಾರೆ.

‘ನನ್ನ ಒಬ್ಬ ವಿದೇಶಿ ಮಾರ್ಗದರ್ಶಿ ಮತ್ತು ಆರು ನೇಪಾಳಿ ಶೆರ್ಪಾ ಮಾರ್ಗದರ್ಶಿಗಳಿಗೆ ಸೋಂಕು ತಗುಲಿದೆ’ ಎಂದು ಆಸ್ಟ್ರಿಯಾದ ಪರ್ವತಾರೋಹಿ ಲೂಕಾಸ್‌ ಫರ್ಟೆನ್‌ಬಾಕ್‌ ಅವರು ಹೇಳಿದರು. ಇವರು ಕಳೆದ ವಾರ ತಮ್ಮ ಮೌಂಟ್‌ ಎವರೆಸ್ಟ್‌ ಚಾರಣವನ್ನು ಸ್ಥಗಿತಗೊಳಿಸಿದ್ದರು.

‘ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ನನ್ನ ಬಳಿ ಪರೀಕ್ಷೆಯ ವರದಿಗಳಿವೆ. ಬೇಸ್‌ ಕ್ಯಾಂಪ್‌ನಲ್ಲಿರುವ ಕನಿಷ್ಠ 100 ಜನರಲ್ಲಿ ಸೋಂಕು ದೃಢಪಟ್ಟಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಬೇಸ್‌ ಕ್ಯಾಂಪ್‌ನಲ್ಲಿ ಹಲವರು ಅನಾರೋಗ್ಯದಿಂದ ಬಳಲುತ್ತಿರುವುದನ್ನು ನಾನು ನೋಡಿದ್ಧೇನೆ. ಟೆಂಟ್‌ಗಳ ಒಳಗಿನಿಂದ ಜನರು ಕೆಮ್ಮುತ್ತಿರುವ ಶಬ್ದಗಳು ಕೇಳುತ್ತಿತ್ತು’ ಎಂದು ಅವರು ದೂರಿದ್ದಾರೆ.

ಆದರೆ, ಸೋಂಕಿನ ಕುರಿತು ವರದಿಗಳನ್ನು ನೇಪಾಳಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ‘ಬೇಸ್‌ ಕ್ಯಾಂಪ್‌ನಲ್ಲಿರುವ ಯಾವುದೇ ಪರ್ವತಾರೋಹಿ ಅಥವಾ ಸಿಬ್ಬಂದಿಗಾಗಲಿ ಸೋಂಕು ತಗುಲಿಲ್ಲ. ಇಲ್ಲಿ ಒಂದು ಪ್ರಕರಣವೂ ಇಲ್ಲ’ ಎಂದಿದ್ದಾರೆ.

ನೇಪಾಳದಲ್ಲಿ ಶುಕ್ರವಾರ 8,607 ಹೊಸ ಪ್ರಕರಣಗಳು ವರದಿಯಾಗಿದ್ದು, ಇದೇ ಸಂದರ್ಭದಲ್ಲಿ 177 ಮಂದಿ ಸೋಂಕಿನಿಂದ ಮೃತ‍ಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4.97 ಲಕ್ಷ ಮತ್ತು ಸಾವಿನ ಸಂಖ್ಯೆ 6,024ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.