
ನ್ಯೂಯಾರ್ಕ್/ವಾಷಿಂಗ್ಟನ್: ‘ಕೌಶಲ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ಕರೆತರುವುದು ಹಾಗೂ ಅವರಿಂದ ಅಮೆರಿಕನ್ನರಿಗೆ ತರಬೇತಿ ಕೊಡಿಸುವುದು. ಆ ಬಳಿಕ ಅವರು ತಮ್ಮ ದೇಶಗಳಿಗೆ ಮರಳಬೇಕು. ಇದು ಎಚ್–1ಬಿ ವೀಸಾದ ಮುಖ್ಯ ಉದ್ದೇಶ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶವೂ ಇದೇ ಆಗಿದೆ’ ಎನ್ನುವ ಮೂಲಕ ಎಚ್–1ಬಿ ವೀಸಾ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ವಿದೇಶಗಳಿಂದ ಬರುವ ಉದ್ಯೋಗಿಗಳು ಮೂರು, ಐದು ಇಲ್ಲವೇ ಏಳು ವರ್ಷ ಇಲ್ಲಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಅವರು ಅಮೆರಿಕನ್ ಉದ್ಯೋಗಿಗಳಿಗೆ ತರಬೇತಿ ನೀಡಿ ತಮ್ಮ ದೇಶಗಳಿಗೆ ಹಿಂತಿರುಗಬೇಕು. ನಂತರ, ಅಮೆರಿಕದ ನೌಕರರೇ ಎಲ್ಲ ಕೆಲಸಗಳನ್ನು ನಿರ್ವಹಣೆ ಮಾಡುವಂತಾಗಬೇಕು ಎಂಬುದು ಟ್ರಂಪ್ ಅವರ ಉದ್ದೇಶವಾಗಿದೆ’ ಎಂದು ಸ್ಕಾಟ್ ಹೇಳಿದ್ದಾರೆ.
‘ಕೆಲವು ಕೆಲಸಗಳನ್ನು ನಿರ್ವಹಿಸಬಲ್ಲಂತಹ ಪ್ರತಿಭಾವಂತರು ಅಮೆರಿಕದಲ್ಲಿ ಇಲ್ಲ’ ಎಂಬ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಕಳೆದ 20–30 ವರ್ಷಗಳವರೆಗೆ ಕೆಲ ನಿರ್ದಿಷ್ಟ ಕೆಲಸಗಳನ್ನು ಇತರ ದೇಶಗಳ ನುರಿತ ಕೆಲಸಗಾರರಿಂದಲೇ ಮಾಡಿಸಲಾಗಿದೆ. ಈಗ, ನೀವು ರಾತ್ರೋರಾತ್ರಿ ಹಡಗು ನಿರ್ಮಾಣ ಕಲಿಯಬೇಕು ಎಂದು ಸ್ಥಳೀಯ ಉದ್ಯೋಗಿಗಳಿಗೆ ಸೂಚನೆ ನೀಡಲು ಸಾಧ್ಯವೇ?’ ಎಂದು ಅವರು ಉತ್ತರಿಸಿದ್ದಾರೆ.
ಕ್ರಿಸ್ಟಿ ಸಮರ್ಥನೆ: ‘ಅಮೆರಿಕವು ಎಚ್–1ಬಿ ವೀಸಾ ಕಾರ್ಯಕ್ರಮವನ್ನು ಮುಂದುವರಿಸಲಿದೆ. ಈ ವೀಸಾ ಸೌಲಭ್ಯ ಪಡೆದು ಇಲ್ಲಿ ಬಂದವರು ಭಯೋತ್ಪಾದಕರನ್ನು ಹಾಗೂ ಅಮೆರಿಕ ದ್ವೇಷಿಸುವವರನ್ನು ಬೆಂಬಲಿಗರಾಗಿರಬಾರದು’ ಎಂದು ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ ಕ್ರಿಸ್ಟಿ ನೋಯಮ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು,‘ಉದ್ಯೋಗ ಅರಸಿ ಅಮೆರಿಕಕ್ಕೆ ಬರುವ ವಿದೇಶಿಯರು ಒಳ್ಳೆಯ ಉದ್ದೇಶದೊಂದಿಗೆ ಇಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು. ಇದಕ್ಕೆ ಪೂರಕವಾಗಿರುವ ಹಾಗೆ ವಲಸೆ ನೀತಿಗಳನ್ನು ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.
ಎಷ್ಟೋ ವರ್ಷಗಳಿಂದ ಅಮೆರಿಕನ್ನರು ಹಡಗು ನಿರ್ಮಾಣ ಮಾಡಿಯೇ ಇಲ್ಲ. ಸೆಮಿಕಂಡಕ್ಟರ್‌ಗಳನ್ನೂ ತಯಾರಿಸಿಲ್ಲ. ಈಗ ಸೆಮಿಕಂಡಕ್ಟರ್ ಉದ್ಯಮವನ್ನು ಅಮೆರಿಕಕ್ಕೆ ಮರಳಿ ತರಲು ಬಯಸಿದ್ದೇವೆಸ್ಕಾಟ್ ಬೆಸೆಂಟ್, ಹಣಕಾಸು ಕಾರ್ಯದರ್ಶಿ ಅಮೆರಿಕ
‘ಸಾವಿರಾರು ಉಗ್ರ’ರು ದೇಶದೊಳಗೆ ಬರಲು ಹಿಂದಿನ ಅಧ್ಯಕ್ಷ ಜೋ ಬೈಡನ್ ಆಡಳಿತ ಅವಕಾಶ ನೀಡಿತ್ತು. ಹೀಗೆ ಬಂದವರು ನಮ್ಮ ಹಲವಾರು ಯೋಜನೆಗಳನ್ನು ದುರುಪಯೋಗಪಡಿಸಿಕೊಂಡರುಕ್ರಿಸ್ಟಿ ನೋಯಮ್, ಆಂತರಿಕ ಭದ್ರತಾ ಇಲಾಖೆ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.