ADVERTISEMENT

ಹೈಟಿ ಅಧ್ಯಕ್ಷನ ಹತ್ಯೆ: ಪೊಲೀಸರ ಗುಂಡೇಟಿಗೆ ನಾಲ್ವರು ಶಂಕಿತ ಹಂತಕರು ಬಲಿ

ಏಜೆನ್ಸೀಸ್
Published 8 ಜುಲೈ 2021, 1:59 IST
Last Updated 8 ಜುಲೈ 2021, 1:59 IST
ಹತ್ಯೆಗೀಡಾಗಿರುವ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಮತ್ತು ಅವರ ಪತ್ನಿ– ಸಾಂದರ್ಭಿಕ ಚಿತ್ರ
ಹತ್ಯೆಗೀಡಾಗಿರುವ ಹೈಟಿ ದೇಶದ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಮತ್ತು ಅವರ ಪತ್ನಿ– ಸಾಂದರ್ಭಿಕ ಚಿತ್ರ   

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ (53) ಅವರ ಹತ್ಯೆ ನಡೆಸಿರುವ ಹಂತಕರೆಂದು ಶಂಕಿಸಲಾಗಿರುವ ನಾಲ್ವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೈಟಿಯ ಪೊಲೀಸ್‌ ಮುಖ್ಯಸ್ಥ ತಿಳಿಸಿದ್ದಾರೆ.

ಹಂತಕರು ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದ ಮೂವರು ಪೊಲೀಸರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್‌ ಮುಖ್ಯಸ್ಥ ಲಿಯೊನ್‌ ಚಾರ್ಲ್ಸ್‌ ಹೇಳಿದ್ದಾರೆ.

ಈಗಾಗಲೇ ಗುಂಪು ಘರ್ಷಣೆ, ಹಣದುಬ್ಬರ ಏರಿಕೆ ಹಾಗೂ ವಿರೋಧ ಪಕ್ಷಗಳ ಬೆಂಬಲಿಗರ ಪ್ರತಿಭಟನೆಗಳಿಂದ ನಲುಗಿರುವ ಹೈಟಿಯಲ್ಲಿ ಜೊವೆನೆಲ್‌ ಮೊಯಿಸ್‌ ಹತ್ಯೆಯು ಮತ್ತಷ್ಟು ಗೊಂದಲಮಯ ವಾತಾವರಣ ಸೃಷ್ಟಿಸಿದೆ. 'ಭದ್ರತೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಂಡಿವೆ' ಎಂದು ಹಂಗಾಮಿ ಪ್ರಧಾನಿ ಕ್ಲೌಡ್‌ ಜೋಸೆಫ್‌ ಹೇಳಿದ್ದಾರೆ.

ADVERTISEMENT

ಬುಧವಾರ ಮುಂಜಾನೆ ಜೊವೆನೆಲ್‌ ಮೊಯಿಸ್‌ ಅವರನ್ನು ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ನಡೆಸಿದೆ. ಈ ವೇಳೆ ಮೊಯಿಸ್‌ ಅವರ ಪತ್ನಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮೆರಿಕ ಖಂಡದಲ್ಲೇ ಅತ್ಯಂತ ಬಡ ರಾಷ್ಟ್ರವಾಗಿರುವ ಹೈಟಿಯಲ್ಲಿ 2017ರಿಂದ ಮೊಯಿಸ್ ಅವರು ಆಡಳಿತ ನಡೆಸುತ್ತಿದ್ದರು. 2010ರಲ್ಲಿ ಸಂಭವಿಸಿದ ಭೂಕಂಪ ಮತ್ತು 2016ರಲ್ಲಿ ಸಂಭವಿಸಿದ್ದ ಮ್ಯಾಥ್ಯೂ ಚಂಡಮಾರುತಗಳು ದೇಶವನ್ನು ಜರ್ಜರಿತಗೊಳಿಸಿದ್ದವು.

ರಾಜಕೀಯ ಅಸ್ಥಿರತೆಯೂ ಕಾಡಿದ್ದರಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೇಗುದಿಗಳು ಅಧಿಕವಾಗಿವೆ. ಅವರ ಅಧಿಕಾರ ಅವಧಿ ಈ ವರ್ಷದ ಫೆಬ್ರುವರಿಯಲ್ಲೇ ಅಂತ್ಯವಾಗಿದೆ, ಹೀಗಾಗಿ ಮೊಯಿಸ್ ಅವರು ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.