ಗಾಜಾದಲ್ಲಿ ಇಸ್ರೇಲ್ ದಾಳಿ
- ರಾಯಿಟರ್ಸ್ ಚಿತ್ರ
ಗಾಜಾಪಟ್ಟಿ: ಇಂದು ಬೆಳಿಗ್ಗೆ ಗಾಜಾಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿನ ತನ್ನ ಸರ್ಕಾರದ ಮುಖ್ಯಸ್ಥ ಇಸಾಮ್ ಅಲ್ ಡಾಲಿಸ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ.
ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ಮುಖ್ಯಸ್ಥ ಮಹ್ಮದ್ ಅಬು ವಾಟ್ಫಾ ಮತ್ತು ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹಜತ್ ಅಬು ಸುಲ್ತಾನ್ ಕೂಡ ಸಾವಿಗೀಡಾಗಿದ್ದಾರೆ.
‘ಉನ್ನತ ನಾಯಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ ಈ ನಾಯಕರು ಮತ್ತು ಅವರ ಕುಟುಂಬ ಸದಸ್ಯರು ಹುತಾತ್ಮರಾಗಿದ್ದಾರೆ’ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳುವಂತೆ ಸೇನೆಗೆ ಸೂಚನೆ ನೀಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಹಮಾಸ್ ವಿರುದ್ಧ ಮಿಲಿಟರಿ ಒತ್ತಡವನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
'ಇನ್ನು ಮುಂದೆ, ಇಸ್ರೇಲ್ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿಕೊಂಡು ಹಮಾಸ್ ವಿರುದ್ಧ ದಾಳಿ ನಡೆಸಲಿದೆ’ಎಂದು ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ 413 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಮೃತರಲ್ಲಿ ಹಲವು ಮಕ್ಕಳು ಸೇರಿವೆ.
2023ರ ಅಕ್ಟೋಬರ್‌ನಲ್ಲಿ ಸಂಘರ್ಷ ಪ್ರಾರಂಭವಾದ ನಂತರ ಗಾಯಾಳುಗಳಿಂದ ತುಂಬಿಹೋಗಿರುವ ಆಸ್ಪತ್ರೆಗಳು, ಹೊಸ ಗಾಯಾಳುಗಳ ಚಿಕಿತ್ಸೆಗೆ ಹೆಣಗಾಡುತ್ತಿವೆ. ವೈದ್ಯಕೀಯ ಸೌಲಭ್ಯಗಳ ಚಿತ್ರಗಳುಲ್ಲಿ ರಕ್ತದ ಮಡುವಿನಲ್ಲಿದ್ದ ಮೃತದೇಹಗಳನ್ನು ಬಿಳಿ ಪ್ಲಾಸ್ಟಿಕ್ ಹಾಳೆಗಳಲ್ಲಿ ಸುತ್ತಿ, ತುರ್ತು ಕಾರ್ಯಾಚರಣಾ ತಂಡಗಳು ಕೆಲಸ ಮಾಡುತ್ತಿರುವುದನ್ನು ಕಂಡುಬಂದಿದೆ.
ಡಜನ್‌ನಷ್ಟು ಗುರಿಗಳನ್ನು ಭೇದಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಅಗತ್ಯವಿರುವವರೆಗೂ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಹೇಳಿದೆ.
ಈ ಮಧ್ಯೆ, ಜನವರಿಯ ಕದನ ವಿರಾಮವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಹಮಾಸ್ ಆರೋಪಿಸಿದೆ. ಇದರಿಂದಾಗಿ ಗಾಜಾದಲ್ಲಿ ಉಳಿದಿರುವ 59 ಒತ್ತೆಯಾಳುಗಳ ಭವಿಷ್ಯ ಅನಿಶ್ಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.