ADVERTISEMENT

ಕದನ ವಿರಾಮಕ್ಕೆ ಹಮಾಸ್ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 12:13 IST
Last Updated 7 ಫೆಬ್ರುವರಿ 2024, 12:13 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ದೋಹಾ: ಗಾಜಾದಲ್ಲಿ ನಾಲ್ಕೂವರೆ ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸುವ ಪ್ರಸ್ತಾವವನ್ನು ಹಮಾಸ್ ಬಂಡುಕೋರರು ಸಿದ್ಧಪಡಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ಸಮ್ಮತಿಯೊಂದಿಗೆ ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆದಾರರು ಸಲ್ಲಿಸಿದ್ದ ಪ್ರಸ್ತಾವಕ್ಕೆ ಪ್ರತಿಯಾಗಿ ಹಮಾಸ್ ಈ ಪ್ರಸ್ತಾವ ಸಿದ್ಧಪಡಿಸಿದೆ. 

ಹಮಾಸ್ ಸಿದ್ಧಪಡಿಸಿರುವ ಪ್ರಸ್ತಾವನೆಯು 45 ದಿನಗಳ ಮೂರು ಹಂತಗಳನ್ನು ಒಳಗೊಂಡಿದೆ. ಈ ಪ್ರಸ್ತಾವನೆಯ ಭಾಗವಾಗಿ, ಬಂಡುಕೋರರು ತಮ್ಮ ವಶದಲ್ಲಿ ಇರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌, ಪ್ಯಾಲೆಸ್ಟೀನ್‌ ಕೈದಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಗಾಜಾದ ಮರುನಿರ್ಮಾಣ ಆಗಬೇಕು, ಇಸ್ರೇಲ್‌ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಹಮಾಸ್ ಹೇಳಿದೆ.

ADVERTISEMENT

ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆದಾರರನ್ನು ಭೇಟಿ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಇಸ್ರೇಲ್‌ಗೆ ಬಂದಿದ್ದಾರೆ. 

ಹಮಾಸ್ ಪ್ರಸ್ತಾವದ ಪ್ರಕಾರ, ಒತ್ತೆಯಾಳುಗಳಾಗಿ ಇರುವ ಇಸ್ರೇಲಿನ ಮಹಿಳೆಯರು, 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು, ವೃದ್ಧರು ಹಾಗೂ ರೋಗಿಗಳನ್ನು ಮೊದಲ 45 ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಜೈಲುಗಳಲ್ಲಿ ಇರುವ ಪ್ಯಾಲೆಸ್ಟೀನ್ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬಿಡುಗಡೆ ಮಾಡಬೇಕು.

ಇನ್ನುಳಿದ ಪುರುಷ ಒತ್ತೆಯಾಳುಗಳನ್ನು ಎರಡನೇ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೂರನೇ ಹಂತದ ಅಂತ್ಯದ ವೇಳೆಗೆ ಎರಡೂ ಕಡೆಯವರು ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಒಪ್ಪಂದವೊಂದಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯು ಹಮಾಸ್ ಪ್ರಸ್ತಾವದಲ್ಲಿ ಇದೆ. ಕದನ ವಿರಾಮ ಸಾಧ್ಯವಾದರೆ ಗಾಜಾಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯು ಸುಗಮವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.