ADVERTISEMENT

ಗಾಜಾ ಮೇಲೆ ಭೂದಾಳಿ ಆರಂಭಿಸಿದ ಇಸ್ರೇಲ್‌

ದಕ್ಷಿಣ ಲೆಬನಾನ್‌ ಮೇಲೆ ನಡೆಸಿದ ಶೆಲ್‌ ದಾಳಿಯಲ್ಲಿ ಒಬ್ಬ ಪತ್ರಕರ್ತ ಹತ; ಆರು ಮಂದಿಗೆ ಗಾಯ

ಎಪಿ
ರಾಯಿಟರ್ಸ್
Published 13 ಅಕ್ಟೋಬರ್ 2023, 21:27 IST
Last Updated 13 ಅಕ್ಟೋಬರ್ 2023, 21:27 IST
   

ಜೆರುಸಲೇಂ: ಹಮಾಸ್‌ ಬಂಡುಕೋರರನ್ನು ಸದೆಬಡಿಯಲು ಗಾಜಾ ನಗರದ ಮೇಲೆ ಭೂಸೇನೆ ಮೂಲಕ ದಾಳಿ ನಡೆಸುವ ಸಲುವಾಗಿ ನಗರದ ಉತ್ತರ ಭಾಗವನ್ನು ತೊರೆಯುವಂತೆ ನಾಗರಿಕರಿಗೆ ಇಸ್ರೇಲ್‌ ಸೇನೆಯು, ಶುಕ್ರವಾರ ನೀಡಿದ್ದ 24 ತಾಸುಗಳ ಗಡುವಿನ ಮೊದಲೇ ದಾಳಿ ಆರಂಭಿಸಿದೆ.

ಗಾಜಾ ಪಟ್ಟಿಯೊಳಗೆ ಭೂಸೇನೆಯು ಕಾರ್ಯಾಚರಣೆಗೆ ಇಳಿದಿದೆ ಎಂದು ಇಸ್ರೇಲ್‌ ಸೇನೆ ಮೊದಲ ಬಾರಿಗೆ ಹೇಳಿದೆ.

‘ಸೇನೆಯು ಹಮಾಸ್ ವಿರುದ್ಧ ಹೋರಾಡಲು, ಶಸ್ತ್ರಾಸ್ತ್ರ ನಾಶಪಡಿಸಲು ಮತ್ತು ಉಗ್ರರು ಒತ್ತೆ ಇರಿಸಿಕೊಂಡಿರುವ ನಾಗರಿಕರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಗಾಜಾ ಪ್ರವೇಶಿಸಿದೆ. ಶುಕ್ರವಾರ ಗಾಜಾ ಮೇಲೆ ಸಣ್ಣ ದಾಳಿಗಳನ್ನು ನಡೆಸಲಾಗಿದೆ’ ಎಂದು ಅದು ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ಇಸ್ರೇಲ್‌ ಸೇನೆಯು ಹಮಾಸ್‌ ಬಂಡುಕೋರರ ಮೇಲೆ ಸಾರಿರುವ ಯುದ್ಧವು ಶುಕ್ರವಾರ ಏಳನೇ ದಿನಕ್ಕೆ ಕಾಲಿರಿಸಿದೆ. ಉಭಯತ್ರರ ಕಡೆಯಿಂದ ಈವರೆಗೂ 2,800ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ.

70 ಜನರ ಸಾವು: ಗಾಜಾ ನಗರದಿಂದ ಜನರನ್ನು ಸ್ಥಳಾಂತರಿಸುತ್ತಿದ್ದ ಬೆಂಗಾವಲು ವಾಹನಗಳ ಮೇಲೆ ಇಸ್ರೇಲ್‌ ಶುಕ್ರವಾರ ನಡೆಸಿದ ವಾಯು ದಾಳಿಯಲ್ಲಿ ಸುಮಾರು 70 ಜನರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಬಹುಶಃ ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್‌ ಬಂಡುಕೋರರ ಮುಖಂಡರು ಹೇಳಿದ್ದಾರೆ.

ಗಾಜಾ ನಗರದ ಉತ್ತರ ಭಾಗದಿಂದ ದಕ್ಷಿಣಕ್ಕೆ ತೆರಳುತ್ತಿದ್ದ ಕಾರುಗಳು ಮೂರು ಸ್ಥಳಗಳಲ್ಲಿ ವೈಮಾನಿಕ ದಾಳಿಗೆ ತುತ್ತಾದವು ಎಂದು ಹಮಾಸ್ ಮಾಧ್ಯಮ ಕಚೇರಿ ಹೇಳಿದೆ. ಇಸ್ರೇಲ್ ಮಿಲಿಟರಿ ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಶನಿವಾರ ಹಮಾಸ್ ಬಂಡುಕೋರರು ಭೀಕರ ಆಕ್ರಮಣ ನಡೆಸಿದ ನಂತರ ಇಸ್ರೇಲ್ ಗಾಜಾ ಗಡಿಯುದ್ದಕ್ಕೂ ಸೇನೆ ಜಮಾವಣೆ ಮಾಡಿದ್ದು, ಗಾಜಾ ಮೇಲೆ ನಿರಂತರ ವಾಯು ದಾಳಿ ನಡೆಸುತ್ತಿದೆ. 

ಲೆಬನಾನ್ ಗಡಿಯಲ್ಲಿ ಇಸ್ರೇಲ್‌ ಶೆಲ್ ದಾಳಿ: ರಾಯಿಟರ್ಸ್‌ ಪತ್ರಕರ್ತ ಹತ, 6 ಪತ್ರಕರ್ತರಿಗೆ ಗಾಯ

ಅಲ್ಮಾ ಅಲ್-ಶಾಬ್ (ಲೆಬನಾನ್), (ಎಪಿ): ದಕ್ಷಿಣ ಲೆಬನಾನ್‌ನ ಗಡಿಯಲ್ಲಿ ಯುದ್ಧ ವರದಿ ಮಾಡಲು ಸೇರಿದ್ದ ಅಂತರರಾಷ್ಟ್ರೀಯ ಪತ್ರಕರ್ತರ ಗುಂಪು ಇಸ್ರೇಲ್‌ ಸೇನೆಯ ಶೆಲ್ ದಾಳಿಗೆ ತುತ್ತಾಗಿದ್ದು, ಈ ದಾಳಿಯಲ್ಲಿ ಒಬ್ಬ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ‘ರಾಯಿಟರ್ಸ್‌’ ಸುದ್ದಿ ಸಂಸ್ಥೆಯ ವಿಡಿಯೊಗ್ರಾಫರ್‌ ಇಸಾಮ್‌ ಅಬ್ದೆಲ್ಲಾ ಎಂದು ಗುರುತಿಸಲಾಗಿದೆ. ‘ದಕ್ಷಿಣ ಲೆಬನಾನ್‌ನಲ್ಲಿ ಕರ್ತವ್ಯ ನಿರ್ವಹಿಸುವಾಗ ಇಸಾಮ್‌ ಕೊಲ್ಲಲ್ಪಟ್ಟಿದ್ದಾರೆ. ಅವರು ನೇರ ವರದಿ ಮಾಡುತ್ತಿದ್ದ ತಂಡದಲ್ಲಿದ್ದರು’ ಎಂದು ‘ರಾಯಿಟರ್ಸ್‌’ ಸುದ್ದಿಸಂಸ್ಥೆ ಹೇಳಿದೆ.

ಕತಾರ್‌ನ ಅಲ್-ಜಜೀರಾ ಟಿ.ವಿಯ ಎಲಿ ಬ್ರಾಖ್ಯಾ ಮತ್ತು ವರದಿಗಾರ ಕಾರ್ಮೆನ್ ಜೌಖಾದರ್ ಗಾಯಗೊಂಡಿದ್ದಾರೆ. ಉಳಿದ ಗಾಯಾಳು ಪತ್ರಕರ್ತರ ವಿವರ ಬಹಿರಂಗವಾಗಿಲ್ಲ. ಪತ್ರಕರ್ತರಿದ್ದ ಕಾರು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಚಿತ್ರವನ್ನು ‘ಅಸೋಸಿಯೇಟೆಡ್‌ ಪ್ರೆಸ್‌’ ಸುದ್ದಿಸಂಸ್ಥೆ ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ.    

ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇಸ್ರೇಲಿ ಪಡೆಗಳು ಮತ್ತು ಲೆಬನಾನ್‌ನ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಸದಸ್ಯರ ನಡುವಿನ ಗುಂಡಿನ ಕಾಳಗದ ವೇಳೆ ಶೆಲ್ ದಾಳಿಯಾಗಿದೆ.

ಹಿಜ್ಬುಲ್ಲಾ ಸಂಘಟನೆ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾಗ ಆತಂಕ ತಲೆದೋರಿರುವುದರಿಂದ ವಿಶ್ವದಾದ್ಯಂತದ ಪತ್ರಕರ್ತರು ವರದಿಗಾಗಿ ಲೆಬನಾನ್‌ಗೆ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.