ADVERTISEMENT

ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಟ್ರಂಪ್

ಟ್ವೀಟ್‌ನಲ್ಲಿ ಹಿಂದೂಗಳನ್ನು ಉಲ್ಲೇಖಿಸದ್ದಕ್ಕೆ ನೆಟ್ಟಿಗರ ಸಿಟ್ಟು

ಪಿಟಿಐ
Published 14 ನವೆಂಬರ್ 2018, 20:19 IST
Last Updated 14 ನವೆಂಬರ್ 2018, 20:19 IST
ಟ್ರಂಪ್ ಅವರು ದೀಪ ಬೆಳಗಿಸುವ ಮೂಲಕ ಶ್ವೇತಭವನದ ದೀಪಾವಳಿ ಸಂಭ್ರಮವನ್ನು ಮಂಗಳವಾರ ಉದ್ಘಾಟಿಸಿದರು– ರಾಯಿಟರ್ಸ್ ಚಿತ್ರ
ಟ್ರಂಪ್ ಅವರು ದೀಪ ಬೆಳಗಿಸುವ ಮೂಲಕ ಶ್ವೇತಭವನದ ದೀಪಾವಳಿ ಸಂಭ್ರಮವನ್ನು ಮಂಗಳವಾರ ಉದ್ಘಾಟಿಸಿದರು– ರಾಯಿಟರ್ಸ್ ಚಿತ್ರ   

ವಾಷಿಂಗ್ಟನ್: ಶ್ವೇತಭವನದ ಪ್ರತಿಷ್ಠಿತ ರೂಸ್‌ವೆಲ್ಟ್‌ ರೂಮ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ದೀಪಾವಳಿ ಆಚರಿಸಿದರು. ಭಾರತೀಯ ಅಮೆರಿಕನ್ನರು, ಭಾರತೀಯ ಮೂಲಕ ಆಡಳಿತಾಧಿಕಾರಿಗಳು ಹಾಗೂ ರಾಜತಾಂತ್ರಿಕ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.

ದೀಪಾವಳಿ ಶುಭಕೋರಲು ಅವರು ಮಾಡಿದ್ದ ಟ್ವೀಟ್, ನೆಟ್ಟಿಗರ ಸಿಟ್ಟಿಗೆ ಕಾರಣವಾಯಿತು.‘ದೀಪಾವಳಿ ಆಚರಣೆಗೆ ನಾವು ಸೇರಿದ್ದೇವೆ. ಅಮೆರಿಕ ಹಾಗೂ ಜಗತ್ತಿನಾದ್ಯಂತ ಇರುವ ಬೌದ್ಧರು, ಸಿಖ್ಖರು ಹಾಗೂ ಜೈನರು ಈ ಹಬ್ಬ ಆಚರಿಸುತ್ತಿದ್ದಾರೆ’ ಎಂದು ಟ್ರಂಪ್ ಟ್ವೀಟ್ ಮಾಡಿದರು.ಟ್ವೀಟ್‌ನಲ್ಲಿ ಹಿಂದೂಗಳ ಹೆಸರನ್ನು ಕೈಬಿಟ್ಟಿದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಯಿತು.

ಇದು ಹಿಂದೂಗಳ ಪ್ರಮುಖ ಹಬ್ಬ ಎಂದು ಸಿಎನ್‌ಎನ್‌ ಪತ್ರಕರ್ತ ಮನು ರಾಜು ಅವರು ನೆನಪಿಸಿದರು. ಟ್ರಂಪ್ ಅವರು ತಮ್ಮ ಟ್ವೀಟ್ ಡೆಲಿಟ್ ಮಾಡಿ, ಮತ್ತೊಂದು ಟ್ವೀಟ್ ಹಂಚಿಕೊಂಡರು. ಆದರೆ ಅಲ್ಲಿಯೂ ಹಿಂದೂಗಳ ಹೆಸರು ಉಲ್ಲೇಖಿಸದೇ ಮರೆತರು. ಈ ಪ್ರಮಾದವನ್ನು ಅವರು ಮೂರನೇ ಟ್ವೀಟ್‌ನಲ್ಲಿ ಸರಿಪಡಿಸಿಕೊಂಡರು.

ADVERTISEMENT

‘ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿಯನ್ನು ರೂಸ್‌ವೆಲ್ಟ್ ರೂಮ್‌ನಲ್ಲಿ ಆಚರಿಸಿದ್ದರು ಬಹಳ ಸಂತೋಷ ನೀಡಿದೆ’ ಎಂದು ಮೂರನೇ ಟ್ವೀಟ್‌ನಲ್ಲಿ ಉಲ್ಲೇಖಿಸಿದರು.

**

‘ಮೋದಿ ಬಗ್ಗೆ ಅಪಾರ ಗೌರವ’

‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತುಂಬಾ ಗೌರವವಿದೆ, ಸದ್ಯದಲ್ಲೇ ಅವರ ಜೊತೆ ಮಾತನಾಡುತ್ತೇನೆ’ ಎಂದು ಟ್ರಂಪ್ ಹೇಳಿದರು.

‘ನಿಮ್ಮ ದೇಶವನ್ನು ನಾನು ಪ್ರೀತಿಸುತ್ತೇನೆ. ಮೋದಿ ಅವರ ಬಗ್ಗೆ ದೊಡ್ಡ ಗೌರವವಿದೆ’ ಎಂದು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.

**

‘ನಾವೀಗ ಇನ್ನೂ ಹತ್ತಿರ’

ಟ್ರಂಪ್ ಅವರಿದ್ದ ವೇದಿಕೆ ಮೇಲೆ ಬರುವಂತೆ ಭಾರತೀಯ ರಾಯಭಾರಿ ನವತೇಜ್ ಸಿಂಗ್ ಸರ್ನಾ ಸೇರಿದಂತೆ ಅಧಿಕಾರಿಗಳಿಗೆ ಆಹ್ವಾನ ನೀಡಲಾಯಿತು. ಅಮೆರಿಕ ತನ್ನ ಮಿತ್ರದೇಶ ಇಸ್ರೇಲ್‌ನಂತಹ ದೇಶಗಳ ಪ್ರತಿನಿಧಿಗಳಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ನೀಡುತ್ತದೆ. ಈ ಬಾರಿ ಭಾರತೀಯರನ್ನು ವೇದಿಕೆಗೆ ಕರೆಯುವ ಮೂಲಕ ಟ್ರಂಪ್ ಇತಿಹಾಸ ಸೃಷ್ಟಿಸಿದ್ದಾರೆ.

‘ಹಿಂದೆಂದಿಗಿಂತಲೂ ಹೆಚ್ಚಾಗಿನಾವೀಗ ಹತ್ತಿರವಾಗಿದ್ದೇವೆ’ ಎಂದು ಟ್ರಂಪ್ ಈ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.