ADVERTISEMENT

ಹಸೀನಾ ಹಸ್ತಾಂತರ: ಭಾರತದ ಪ್ರತಿಕ್ರಿಯೆ ಬಯಸಿದ ಬಾಂಗ್ಲಾ

ಪಿಟಿಐ
Published 26 ನವೆಂಬರ್ 2025, 15:44 IST
Last Updated 26 ನವೆಂಬರ್ 2025, 15:44 IST
ಶೇಖ್ ಹಸೀನಾ
ಶೇಖ್ ಹಸೀನಾ   

ಢಾಕಾ: ‘ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಹಸ್ತಾಂತರ ಕುರಿತು ಈ ಹಿಂದೆ ಮಾಡಿದ್ದ ಮನವಿಗೆ ಭಾರತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ನ್ಯಾಯಿಕ ಪ್ರಕ್ರಿಯೆ ಮುಗಿದು, ಮಾಜಿ ಪ್ರಧಾನಿ ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಭಾರತದಿಂದ ನಾವು ಪ್ರತಿಕ್ರಿಯೆ ಬಯಸುತ್ತೇವೆ’ ಎಂದು ಬಾಂಗ್ಲಾ ದೇಶದ ಸರ್ಕಾರ ಬುಧವಾರ ಹೇಳಿದೆ.

‘ಮಾನವೀಯತೆ ಮೇಲಿನ ದಾಳಿ’ ಕುರಿತ ಆರೋಪವು ಸಾಬೀತಾದ ನಂತರ ಅಂತರರಾಷ್ಟ್ರೀಯ ವಿಶೇಷ ನ್ಯಾಯಮಂಡಳಿ 78 ವರ್ಷದ ಹಸೀನಾ ಅವರಿಗೆ ನವೆಂಬರ್‌ 17ರಂದು ಮರಣ ದಂಡನೆ ವಿಧಿಸಿತ್ತು. ಇದಾದ ನಂತರ ಕಳೆದ ವಾರ ಮುಹಮ್ಮದ್ ಯೂನಸ್ ಅವರ ನೇತೃತ್ವದ ಮಧ್ಯಂತರ ಸರ್ಕಾರ ಭಾರತ ಸರ್ಕಾರಕ್ಕೆ ಅಧಿಕೃತ ಪತ್ರವೊಂದನ್ನು ರವಾನಿಸಿದೆ. ಇತ್ತೀಚಿನ ಮನವಿಗೆ ನಾವು ಭಾರತದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ’ ಎಂದು ಬಾಂಗ್ಲಾ ವಿದೇಶಾಂಗ ಇಲಾಖೆ ಸಲಹೆಗಾರ ಎಂ. ತೌಹಿದ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಅವರು (ಭಾರತ ಸರ್ಕಾರ) ಒಂದು ವಾರದಲ್ಲಿ ಉತ್ತರ ನೀಡಬಹುದು ಎಂದೇನೂ ನಾನು ನಿರೀಕ್ಷಿಸುವುದಿಲ್ಲ. ಆದರೆ, ಉತ್ತರ ಸಿಗಬೇಕೆಂದು ಬಯಸುತ್ತೇವೆ. ಎರಡೂ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅನ್ವಯ ಹಸೀನಾ ಅವರನ್ನು ವಶಕ್ಕೆ ಒಪ್ಪಿಸಬೇಕೆಂದು ನವದೆಹಲಿಯಲ್ಲಿರುವ ಬಾಂಗ್ಲಾ ಹೈಕಮಿಷನ್ ಭಾರತಕ್ಕೆ ಅಧಿಕೃತ ಮನವಿ ಸಲ್ಲಿಸಿತ್ತು’ ಎಂದರು.

ADVERTISEMENT

ಭಾರಿ ಪ್ರತಿಭಟನೆ, ಹಿಂಸಾಚಾರದ ನಂತರ ಪದಚ್ಯುತಿಗೊಂಡಿದ್ದ ಶೇಖ್‌ ಹಸೀನಾ ಅವರು 2024ರ ಆಗಸ್ಟ್‌ನಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

‘ಪರಾರಿಯಾದ ಅಪರಾಧಿಗಳ’ ಹಸ್ತಾಂತರಕ್ಕಾಗಿ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ಅಪರಾಧಿಕ ನ್ಯಾಯಾಲಯದ (ಐಸಿಸಿ) ಮೊರೆಹೋಗಲು ಚಿಂತನೆ ನಡೆಸುತ್ತಿರುವುದಾಗಿ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್‌ ನಸ್ರುಲ್‌ ನವೆಂಬರ್‌ 20ರಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.