ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ವಾಷಿಂಗ್ಟನ್: ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿದ್ದಾರೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡು ಬರಮಾಡಿಕೊಂಡಿರುವ ಟ್ರಂಪ್, 'ನಿಮ್ಮನ್ನು ಭೇಟಿಯಾಗಲು ಖುಷಿಯಾಗುತ್ತಿದೆ. ನೀವು ನನ್ನ ದೀರ್ಘಕಾಲದ ಉತ್ತಮ ಸ್ನೇಹಿತ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ' ಎಂದು ಹೇಳಿದ್ದಾರೆ.
ಉಭಯ ನಾಯಕರೂ ಟ್ರಂಪ್ ಮೊದಲ ಅವಧಿಯಲ್ಲಿ ಭಾರತ-ಅಮೆರಿಕ ಉತ್ತಮ ಬಾಂಧವ್ಯದ ಕುರಿತಾಗಿಯೂ ಮೆಲುಕು ಹಾಕಿದ್ದಾರೆ.
ಮುಂದುವರಿದು, 'ಅವರು (ಪ್ರಧಾನಿ ಮೋದಿ) ನನಗಿಂತಲೂ ಕಟ್ಟುನಿಟ್ಟಿನ ಚೌಕಾಶಿ ಮಾಡಬಲ್ಲರು, ನನಗಿಂತಲೂ ಸಾಕಷ್ಟು ಚೆನ್ನಾಗಿ ಚೌಕಾಶಿ ಮಾಡುವವರು. ಇಲ್ಲಿ ಸ್ಫರ್ಧೆಯೇ ಇಲ್ಲ' ಎಂದು ಹೇಳಿದ್ದಾರೆ.
'ಎಲ್ಲರೂ ಅವರ ಕುರಿತು ಮಾತನಾಡುತ್ತಾರೆ. ನಿಜಕ್ಕೂ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಶ್ರೇಷ್ಠ ನಾಯಕ, ವಿಶೇಷ ವ್ಯಕ್ತಿ' ಎಂದು ಗುಣಗಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅವರ್ ಜರ್ನಿ ಟುಗೇದರ್' ಪುಸ್ತಕವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕದಲ್ಲಿ 'ಮಿಸ್ಟರ್ ಪಿಎಂ ಯು ಆರ್ ಗ್ರೇಟ್' ಎಂದು ಮೋದಿ ಕುರಿತು ಬರೆದುಕೊಂಡಿದ್ದಾರೆ.
ಪುಸ್ತಕವನ್ನು ಮೋದಿಗೆ ಹಸ್ತಾಂತರಿಸುವ ವೇಳೆ 'ಹೌಡಿ ಮೋಡಿ' ಹಾಗೂ 'ನಮಸ್ತೆ ಟ್ರಂಪ್' ಕಾರ್ಯಕ್ರಮದ ಚಿತ್ರಗಳನ್ನು ಮೋದಿ ಅವರಿಗೆ ಟ್ರಂಪ್ ತೋರಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.