ADVERTISEMENT

ಹೃದಯದ ಆರೋಗ್ಯಕ್ಕೆ ಬೇಕು 20 ನಿಮಿಷಕ್ಕೊಮ್ಮೆ ಬ್ರೇಕ್‌!

ಪಿಟಿಐ
Published 22 ಅಕ್ಟೋಬರ್ 2018, 10:32 IST
Last Updated 22 ಅಕ್ಟೋಬರ್ 2018, 10:32 IST
ಸಾಮೂಹಿಕ ನೃತ್ಯ–ವ್ಯಾಯಾಮದಲ್ಲಿ ನಿರತರಾಗಿರುವ ಜನ– ಸಾಂದರ್ಭಿಕ ಚಿತ್ರ
ಸಾಮೂಹಿಕ ನೃತ್ಯ–ವ್ಯಾಯಾಮದಲ್ಲಿ ನಿರತರಾಗಿರುವ ಜನ– ಸಾಂದರ್ಭಿಕ ಚಿತ್ರ   

ಟೊರೊಂಟೊ: ಹೃದ್ರೋಗಿಗಳು 20 ನಿಮಿಷಕ್ಕೂ ಹೆಚ್ಚು ಕಾಲ ತಟಸ್ಥರಾಗಿ ಕುಳಿತಿರುವುದನ್ನು ತಪ್ಪಿಸಬೇಕು ಹಾಗೂ ಪ್ರತಿ 20 ನಿಮಿಷಕ್ಕೊಮ್ಮೆ ಏಳು ನಿಮಿಷಗಳ ದೈಹಿಕ ಚಟುವಟಿಕೆ ನಡೆಸುವ ಮೂಲಕ ಸುದೀರ್ಘ ಆಯಸ್ಸು ಪಡೆಯಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ.

’ಹೆಚ್ಚು ಸಮಯ ದೈಹಿಕ ಚಟುವಟಿಕೆಗಳಿಲ್ಲದೆ ಕೂರುವುದರಿಂದ ಜೀವಿತಾವಧಿ ಕಡಿಮೆಯಾಗುತ್ತದೆ ಎಂದು ಹಿಂದಿನ ಸಂಶೋಧನೆಗಳಿಂದ ತಿಳಿದುಬಂದಿತ್ತು. ನಿತ್ಯ ಕನಿಷ್ಠ 770 ಕಿಲೋ ಕ್ಯಾಲೊರಿ ಕರಗಿಸುವ ಮೂಲಕ ಹೃದಯ ಸಂಬಂಧಿತ ಅಪಾಯದಿಂದ ಪಾರಾಗಬಹುದು, ಆಗಾಗ್ಗೆ ಓಡಾಟ ನಡೆಸುವುದರಿಂದ ಇದು ಸಾಧ್ಯವಾಗಲಿದೆ.’ಟೊರೊಂಟೊದಲ್ಲಿ ನಡೆದ ಕೆನಡಿಯನ್‌ ಕಾರ್ಡಿಯೊವಾಸ್ಕ್ಯುಲಾರ್‌ ಕಾಂಗ್ರೆಸ್‌(ಸಿಸಿಸಿ) ವಾರ್ಷಿಕ ಅಧಿವೇಶನದಲ್ಲಿ ಈ ಹೊಸ ಅಧ್ಯಯನವನ್ನು ಪ್ರಸ್ತುತ ಪಡಿಸಲಾಗಿದೆ.

770 ಕಿಲೋ ಕ್ಯಾಲೊರಿ ಕರಗಿಸಲು ಎಷ್ಟು ಮಧ್ಯಂತರ ಹಾಗೂ ಎಷ್ಟು ಸಮಯದವರೆಗೂ ತೆಗೆದುಕೊಳ್ಳಬೇಕು ಎಂಬುದರ ಅಧ್ಯಯನ ನಡೆಸಲಾಗಿದೆ ಎಂದು ಕೆನಡಾದ ಯೂನಿವರ್ಸಿಟಿ ಆಫ್‌ ಆಲ್ಬರ್ಟಾದ ಐಲರ್‌ ರಮಾಡಿ ತಿಳಿಸಿದ್ದಾರೆ.ನಿಂತು ಓಡಾಡುವ ರೀತಿಯ ಸರಳ ಚಟುವಟಿಕೆಗಳನ್ನು 20 ನಿಮಿಷಗಳ ಅಂತರದಲ್ಲಿ ಏಳು ನಿಮಿಷಗಳ ವರೆಗೂ ನಡೆಸುವುದರಿಂದ ಸುಲಭವಾಗಿ 770 ಕಿಲೋ ಕ್ಯಾಲೊರಿ ಕರಗಿಸುವುದು ಸಾಧ್ಯ ಎನ್ನಲಾಗಿದೆ.

ADVERTISEMENT

ಸರಾಸರಿ 63 ವರ್ಷ ವಯಸ್ಸಿನ 132 ಹೃದ್ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು, ಐದು ದಿನಗಳು ನಿತ್ಯ ಸರಾಸರಿ 22 ಗಂಟೆಗಳ ಚಟುವಟಿಕೆಯನ್ನು ದಾಖಲಿಸಲಾಗಿತ್ತು. ಚಟುವಟಿಕೆ ಗಮನಿಸಲು ರೋಗಿಗಳ ಕೈಯಿಗಳಿಗೆ ವಿಶೇಷ ಬ್ಯಾಂಡ್‌ ಹಾಕಲಾಗಿತ್ತು. ಅಧ್ಯಯನದಲ್ಲಿ ಭಾಗಿಯಾದವರ ಪೈಕಿ ಶೇ 77ರಷ್ಟು ಮಂದಿ ಪುರುಷರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.