ADVERTISEMENT

COP28 | ಪಳೆಯುಳಿಕೆ ಇಂಧನ ಬಳಕೆ ತಗ್ಗಿಸಲು ನಿರ್ಣಯ

ಪಿಟಿಐ
Published 13 ಡಿಸೆಂಬರ್ 2023, 16:00 IST
Last Updated 13 ಡಿಸೆಂಬರ್ 2023, 16:00 IST
<div class="paragraphs"><p>ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದ ಅಧ್ಯಕ್ಷ (ಸಿಒಪಿ28) ಸುಲ್ತಾನ್‌ ಅಹ್ಮದ್‌ ಅಲ್‌ ಜಬೇರ್‌ ಅವರು ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು</p></div>

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದ ಅಧ್ಯಕ್ಷ (ಸಿಒಪಿ28) ಸುಲ್ತಾನ್‌ ಅಹ್ಮದ್‌ ಅಲ್‌ ಜಬೇರ್‌ ಅವರು ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು

   

ದುಬೈ: ಹವಾಮಾನ ಬಿಕ್ಕಟ್ಟಿಗೆ ಕಾರಣವಾದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ನಿಲ್ಲಿಸಬೇಕು. ಈ ಕಾರ್ಯವು ‘ನ್ಯಾಯಯುತ ಹಾಗೂ ನಿಷ್ಪಕ್ಷಪಾತ’ ತತ್ವದಡಿ ನಡೆಯಬೇಕು ಎಂಬ ಮಹತ್ವದ ನಿರ್ಣಯವನ್ನು ಇಲ್ಲಿ ಮುಕ್ತಾಯಗೊಂಡ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಸಿಒಪಿ28) ಬುಧವಾರ ಕೈಗೊಳ್ಳಲಾಗಿದೆ.

ಎರಡು ವಾರಗಳ ಕಾಲ ನಡೆದ ಈ ಸಮಾವೇಶದಲ್ಲಿ 200 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮಾವೇಶದ ಸಮಾರೋಪದ ಅಂಗವಾಗಿ ನಡೆದ ಕೊನೆಯ ಗೋಷ್ಠಿಯಲ್ಲಿ ಸುದೀರ್ಘ ಚರ್ಚೆ ಬಳಿಕ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ADVERTISEMENT

ಇದನ್ನು ‘ಯುಎಇ ಒಪ್ಪಂದ’ ಎಂದೂ ಕರೆಯಲಾಗಿದೆ. ‘ಸಿಒಪಿ28’ ಅಧ್ಯಕ್ಷ ಸುಲ್ತಾನ್ ಅಲ್‌–ಜಬೇರ್ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳ ಕರತಾಡನದ ನಡುವೆ ‘ಯುಎಇ ಒಪ್ಪಂದ’ವನ್ನು ಘೋಷಿಸಿದರು.

ಜಗತ್ತು ಶ್ರೀಮಂತ ಹಾಗೂ ಹೆಚ್ಚು ಪ್ರಭಾವ ಹೊಂದಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸೇರಿದೆ ಎಂಬುದು ‘ಸಿಒಪಿ28’ ಕೈಗೊಂಡಿರುವ ನಿರ್ಣಯದಿಂದ ಸ್ಪಷ್ಟವಾಗುತ್ತದೆ
ಸಂಜಯ್‌ ವಶಿಷ್ಠ, ಕ್ಲೈಮೇಟ್‌ ಚೇಂಜ್ ನೆಟ್‌ವರ್ಕ್‌ ಸೌಥ್‌ ಏಷ್ಯಾ, ನಿರ್ದೇಶಕ

ವಿದ್ಯುತ್‌ ಉತ್ಪಾದನೆಗೆ ಅವ್ಯಾಹತವಾಗಿ ಕಲ್ಲಿದ್ದಲು ಬಳಸುವುದನ್ನು ಕ್ರಮೇಣ ಕಡಿಮೆ ಮಾಡಲು ಎಲ್ಲ ದೇಶಗಳು ಪ್ರಯತ್ನಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್‌ಡಿಸಿ)ಯಲ್ಲಿ ವಿವರಿಸಿರುವಂತೆ, ಉಷ್ಣವರ್ಧಕ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸಲು ತ್ವರಿತ ಹಾಗೂ ಸುಸ್ಥಿರ ಕ್ರಮಗಳನ್ನು ಕೈಗೊಳ್ಳಬೇಕು. ಈ ಗುರಿ ಸಾಧನೆಗಾಗಿ ರೂಪಿಸಿರುವ 8 ಅಂಶಗಳ ಯೋಜನೆಯನ್ನು ಎಲ್ಲ ದೇಶಗಳು ಅನುಸರಿಸಬೇಕು ಎಂಬುದು ಸೇರಿದಂತೆ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಭಾರತ, ಚೀನಾ ಆಕ್ಷೇಪ

ಚರ್ಚೆ ವೇಳೆ, ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸುವುದನ್ನು ತ್ವರಿತವಾಗಿ ತಗ್ಗಿಸಬೇಕು ಎಂದು ಪ್ರಸ್ತಾಪಿಸಲಾಯಿತು. ಆದರೆ, ವಿದ್ಯುತ್‌ ಉತ್ಪಾದನೆಗೆ ತೈಲ ಮತ್ತು ನೈಸರ್ಗಿಕ ಅನಿಲ ಬಳಕೆ ಕಡಿಮೆ ಮಾಡಬೇಕು ಎಂಬ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈ ತಾರತಮ್ಯ ಧೋರಣೆಗೆ ಭಾರತ ಮತ್ತು ಚೀನಾ ಆಕ್ಷೇಪ ವ್ಯಕ್ತಪಡಿಸಿದವು.

ಭಾರತ ಮತ್ತು ಚೀನಾ, ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲನ್ನು ಅತಿ ಹೆಚ್ಚು ಅವಲಂಬಿಸಿರುವುದು ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.