ADVERTISEMENT

ಹಿಂಸೆ ನಿಲ್ಲದಿದ್ದರೆ ಅಪಾಯ

ಹಾಂಗ್‌ಕಾಂಗ್‌ ಮತ್ತೆ ಉದ್ವಿಗ್ನ l ಸ್ಥಳೀಯ ನಾಯಕಿ ಕ್ಯಾರಿ ಲ್ಯಾಮ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 20:15 IST
Last Updated 13 ಆಗಸ್ಟ್ 2019, 20:15 IST
ಹಾಂಗ್‌ಕಾಂಗ್‌ ವಿಮಾನ ನಿಲ್ದಾಣದಿಂದ ಮಂಗಳವಾರ ಎಲ್ಲ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದರಿಂದಾಗಿ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾಲ ಕಳೆದರು –ರಾಯಿಟರ್ಸ್‌ ಚಿತ್ರ
ಹಾಂಗ್‌ಕಾಂಗ್‌ ವಿಮಾನ ನಿಲ್ದಾಣದಿಂದ ಮಂಗಳವಾರ ಎಲ್ಲ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದರಿಂದಾಗಿ ಪ್ರಯಾಣಿಕರು ನಿಲ್ದಾಣದಲ್ಲಿಯೇ ಕಾಲ ಕಳೆದರು –ರಾಯಿಟರ್ಸ್‌ ಚಿತ್ರ   

ಹಾಂಗ್‌ಕಾಂಗ್‌:ಪ್ರಜಾಪ್ರಭುತ್ವ ಪರ ಇರುವ ಪ್ರತಿಭಟನಕಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ದೈನಂದಿನ ಕಾರ್ಯಚಟುವಟಿಕೆಗೆ ಪ್ರತಿಭಟನಕಾರರು ಮಂಗಳವಾರವೂ ಅಡ್ಡಿಯನ್ನುಂಟು ಮಾಡಿದರು. ಹೀಗಾಗಿ, ಎಲ್ಲ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು.

ಈ ನಡುವೆ, ಚೀನಾ ಪರ ಒಲವಿರುವ ಸ್ಥಳೀಯ ನಾಯಕಿ ಕ್ಯಾರಿ ಲ್ಯಾಮ್‌, ‘ಪ್ರತಿಭಟನೆಯನ್ನು ಕೂಡಲೇ ನಿಲ್ಲಿಸಬೇಕು. ಹಿಂಸಾಕೃತ್ಯಗಳು ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಬಹಳ ಅಪಾಯಕಾರಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ನೇರವಾಗಿ ಹಿಂಸೆಯಲ್ಲಿ ತೊಡಗುವುದು ಇಲ್ಲವೇ ಹಿಂಸಾಕೃತ್ಯಕ್ಕೆ ಪ್ರಚೋದನೆ ನೀಡುವುದು ತಪ್ಪು. ಈ ರೀತಿ ಮಾಡುವುದರಿಂದ ಹಾಂಗ್‌ ಕಾಂಗ್‌ನಲ್ಲಿ ಬಹಳ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗುತ್ತದೆ’ ಎಂದು ಭಾವುಕರಾಗಿ ಹೇಳಿದರು.

ADVERTISEMENT

ಒಂದು ಹಂತದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ತೀಕ್ಷ್ಣ ಪ್ರಶ್ನೆಗಳಿಂದಾಗಿ ಒತ್ತರಿಸಿ ಬಂದ ದುಃಖವನ್ನು ನುಂಗಿ, ಕೂಡಲೇ ಸಾವರಿಸಿಕೊಂಡ ಲ್ಯಾಮ್‌, ಸಮಾಧಾನದಿಂದ ಇರುವಂತೆ ಮನವಿ ಮಾಡಿದರು.

‘ನಮ್ಮ ನಗರ, ನಮ್ಮ ಮನೆಗಳಿಗೆ ಈಗ ಬಂದೊದಗಿರುವ ಸ್ಥಿತಿ ಬಗ್ಗೆ ಒಂದು ನಿಮಿಷ ಯೋಚಿಸಿ. ಪರಿಸ್ಥಿತಿ ಹೀಗೇ ಮುಂದುವರಿದು, ಹಾಂಗ್‌ಕಾಂಗ್‌ ಪ್ರಪಾತಕ್ಕೆ ಬೀಳಬೇಕು ಎಂಬುದೇ ನಿಮ್ಮ ಅಪೇಕ್ಷೆಯೇ’ ಎಂದು ಪ್ರಶ್ನಿಸಿದರು.

ಖಂಡನೆ: ಇನ್ನೊಂದೆಡೆ, ಸೋಮವಾರದಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಚೀನಾ ಖಂಡಿಸಿದೆ.
ಪೊಲೀಸ್‌ ಅಧಿಕಾರಿಗಳತ್ತ ಪೆಟ್ರೋಲ್‌ ಬಾಂಬ್‌ ಎಸೆದಿರುವುದು ಭಯೋತ್ಪಾದನಾ ಕೃತ್ಯ ಎಂದೂ ಆಕ್ರೋಶ ವ್ಯಕ್ತಪಡಿಸಿದೆ.

ವಿಮಾನ ಸಂಸ್ಥೆಗಳ ಸಂಪರ್ಕದಲ್ಲಿರಿ’

ಹಾಂಗ್‌ಕಾಂಗ್‌ ವಿಮಾನನಿಲ್ದಾಣ ಒಳಗೂ ಪ್ರತಿಭಟನೆ ಮುಂದುವರಿದ ಕಾರಣ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಹಾಂಗ್‌ಕಾಂಗ್‌ಗೆ ಬರುವ ಅಥವಾ ಇಲ್ಲಿ ಇಳಿದು, ಬೇರೆ ದೇಶಗಳಿಗೆ ಪ್ರಯಾಣ ಮುಂದುವರಿಸಲಿರುವ ಭಾರತೀಯರಿಗೆ ಇಲ್ಲಿನ ಕಾನ್ಸುಲೇಟ್‌ ಕಚೇರಿಸಲಹೆ ನೀಡಿದೆ.

‘ಇಲ್ಲಿನ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಭಾರತೀಯ ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು’ ಎಂದು ಕಚೇರಿಯ ವೆಬ್‌ಸೈಟ್‌ನಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.