ವಾಷಿಂಗ್ಟನ್: ಅಧ್ಯಕ್ಷ ಜೋ ಬೈಡನ್ ವಿರುದ್ಧ ಮಂಡನೆಯಾಗಿರುವ ವಾಗ್ದಂಡನೆ ನಿಲುವಳಿ ಕುರಿತ ವಿಚಾರಣೆಯನ್ನು ಅಮೆರಿಕದ ರಿಪಬ್ಲಿಕನ್ ಸಂಸದರು ಗುರುವಾರ ಆರಂಭಿಸಿದರು.
‘ಸಂಸತ್‌ನ ಮೇಲುಸ್ತುವಾರಿ, ನ್ಯಾಯಾಂಗ ಕುರಿತ ಸಮಿತಿಗಳ ಅಧ್ಯಕ್ಷರು ವಿಚಾರಣೆ ಆರಂಭಿಸಿದ್ದು, ವಾಗ್ದಂಡನೆ ಪ್ರಕ್ರಿಯೆ ಒಳಗೊಂಡಿರುವ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಶ್ನೆಗಳ ಕುರಿತು ಪರಿಶೀಲನೆ ನಡೆಸಿದರು’ ಎಂದು ಮೂಲಗಳು ಹೇಳಿವೆ.
ಪುತ್ರ ಹಂಟರ್ ಅವರು ವಿದೇಶಗಳಲ್ಲಿ ಹೊಂದಿರುವ ಉದ್ಯಮದೊಂದಿಗೆ ಅಧ್ಯಕ್ಷ ಬೈಡನ್ ಹೊಂದಿರುವ ನಂಟಿಗೆ ಸಂಬಂಧಿಸಿ ಈ ವಾಗ್ದಂಡನೆ ನಿಲುವಳಿ ಮಂಡಿಸಲಾಗಿದೆ.
‘ಉದ್ಯಮದಲ್ಲಿ ಕುಟುಂಬಕ್ಕೆ ಲಾಭ ಮಾಡಿಕೊಡುವ ಸಲುವಾಗಿ ಬೈಡನ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದಕ್ಕೆ ಸಂಸದರ ಬಳಿ ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ಮೇಲುಸ್ತುವಾರಿ ಮತ್ತು ಉತ್ತರದಾಯಿತ್ವ ಸಮಿತಿ ಅಧ್ಯಕ್ಷ ಜೇಮ್ಸ್ ಕಾಮರ್ ಹೇಳಿದ್ದಾರೆ.
‘ಬೈಡನ್ ಪುತ್ರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ, ಹಣಕಾಸು ವ್ಯವಹಾರ ಹಾಗೂ ಸಾಕ್ಷ್ಯಗಳನ್ನು ಸಮಿತಿಯು ಪರಿಶೀಲನೆ ನಡೆಸಲಿದೆ’ ಎಂದೂ ಹೇಳಿದ್ದಾರೆ.
ಟೀಕೆ: ‘ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳಲು ಇನ್ನೂ 62 ಗಂಟೆಗಳು ಬಾಕಿ ಇವೆ. ಈಗ, ರಿಪಬ್ಲಿಕನ್ ಸಂಸದರು ವಾಗ್ದಂಡನೆ ನಿಲುವಳಿ ಕುರಿತ ವಿಚಾರಣೆಯನ್ನು ಆರಂಭಿಸಿದ್ದಾರೆ’ ಎಂದು ಡೆಮಾಕ್ರಟಿಕ್ ಸಂಸದ ಜೆಮಿ ರಸ್ಕಿನ್ ಟೀಕಿಸಿದ್ದಾರೆ.
‘ಈ ವಾಗ್ದಂಡನೆ ಕಾನೂನುಬದ್ಧವೇ’ ಎಂದು ಪ್ರಶ್ನಿಸಿದ ರಸ್ಕಿನ್, ‘ವಿಚಾರಣೆ ಆರಂಭಿಸುವುದಕ್ಕೆ ಸದನವು ಇನ್ನೂ ಅನುಮೋದನೆಯನ್ನೇ ನೀಡಿಲ್ಲ. ಐದು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಮಾಡಿದ್ದ ಆರೋಪಗಳಿಗೆ ರಿಪಬ್ಲಿಕನ್ನರು ಹೊಸ ರೂಪ ನೀಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಅಧ್ಯಕ್ಷ ಬೈಡನ್ ವಿರುದ್ಧದ ಆರೋಪ ಕುರಿತಂತೆ ಅವರ ಬಳಿ ಯಾವುದೇ ಸಾಕ್ಷ್ಯವೂ ಇಲ್ಲ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.