ADVERTISEMENT

ಶ್ರೀದೇವಿ, ಶಶಿ ಕಪೂರ್‌ಗೆ ಮರಣೋತ್ತರವಾಗಿ ‘ಐಫಾ’ ಪ್ರಶಸ್ತಿ

ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಏಜೆನ್ಸೀಸ್
Published 25 ಜೂನ್ 2018, 3:09 IST
Last Updated 25 ಜೂನ್ 2018, 3:09 IST
   

ಬ್ಯಾಂಕಾಕ್‌:ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳಾದ ನಟಿ ಶ್ರೀದೇವಿ ಮತ್ತು ನಟ ಶಶಿ ಕಪೂರ್‌ ಅವರಿಗೆ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ(ಐಐಎಫ್‌ಎ; ‘ಐಫಾ’) ಪ್ರಶಸ್ತಿ ನೀಡಿ ಗೌರವಿಸಿತು. ಮರಣೋತ್ತರವಾಗಿ ಈ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.

ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ, ಶಶಿ ಕಪೂರ್‌ಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಬಾಲಿವುಡ್‌ನ ಆಸ್ಕರ್‌ ಎಂದೇ ಕರೆಯಲ್ಪಡುವ ಐಐಎಫ್‌ಎ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮನಮೋಹಕ ಮತ್ತು ಅತ್ಯಾಕರ್ಶಕ ಸಂಗೀತ,ನೃತ್ಯಗಳಿಂದ ಕೂಡಿತ್ತು. ಈ ಅದ್ದೂರಿ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಥಾಯ್ಲೆಂಡ್‌ನ ರಾಜಧಾನಿಯಲ್ಲಿ ಸ್ಟಾರ್‌ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರ ದಂಡೇ ಸೇರಿತ್ತು.

ADVERTISEMENT

ಕೆಲ ತಿಂಗಳುಗಳ ಹಿಂದೆಯಷ್ಟೇ ಮೃತಪಟ್ಟ ಶ್ರೀದೇವಿ ಅವರಿಗೆ ಇಲ್ಲಿ ನಡೆದ ನೃತ್ಯ ಮತ್ತು ಸಂಗೀತಗಳೊಂದಿಗಿನ ವರ್ಣರಂಜಿತ ಸಮಾರಂಭದಲ್ಲಿ ಗೌರವ ನೀಡಲಾಯಿತು.

‘ಮಾಮ್‌’ ಚಿತ್ರದಲ್ಲಿನ ತಾಯಿ ಪಾತ್ರದ ಅಭಿನಯಕ್ಕಾಗಿ ಶ್ರೀದೇವಿ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಈ ಚಿತ್ರದಲ್ಲಿ ತನ್ನ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರತಿಕಾರ ತೀರಿಸಿಕೊಳ್ಳಲು ತಾಯಿ ನಡೆಸುವ ಹೋರಾಟದ ಪಾತ್ರ ಗಮನ ಸೆಳೆದಿತ್ತು.

ರಿಷಿ ಕಪೂರ್ ಮತ್ತು ರಣಬೀರ್ ಕಪೂರ್ ಅವರು ಶಶಿ ಕಪೂರ್ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಶಿ ಕಪೂರ್‌ ಅವರು ಪಿತ್ತಜನಕಾಂಗದ ಸಮಸ್ಯೆಗಳಿಂದ 79ನೇ ವಯಸ್ಸಿನಲ್ಲಿ 2017ರ ಡಿಸೆಂಬರ್‌ನಲ್ಲಿ ನಿಧನರಾಗಿದ್ದಾರೆ.

'ಶಶಿ ಕಪೂರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕಾಗಿ ಧನ್ಯವಾದಗಳು, ಇದು ನಮಗೆ ಹೆಮ್ಮೆಯ ಕ್ಷಣಗಳು’ ಎಂದು ರಿಷಿ ಕಪೂರ್‌ ಹೇಳಿದರು.

ಆದರೆ, ಪ್ರತಿಷ್ಠಿತವಾದ ಈ ಪ್ರಶಸ್ತಿ ವಿಜೇತರಾದ ಇಬ್ಬರಿಗೆ ಅವರ ಅನುಪಸ್ಥಿತಿಯಲ್ಲಿ ಬಹುಮಾತ ನೀಡಲಾಯಿತು.

‘ಲೈಫ್‌ ಆಫ್‌ ಪೈ’ ಮತ್ತು ‘ಸ್ಲಂ ಡಾಗ್‌ ಮಿಲೇನಿಯರ್‌’ ಚಿತ್ರಗಳಲ್ಲಿನ ತಮ್ಮ ಅಭಿನಯದ ಮೂಲಕ ಅಂತರರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಇರ್ಫಾನ್‌ ಖಾನ್‌ ಅವರಿಗೆ ಅತ್ಯುತ್ತಮ ನಟನೆ ಪ್ರಶಸ್ತಿ ಲಭಸಿತ್ತು. ಅನಾರೋಗ್ಯ ಕಾರಣ ಅವರು ಸಮಾರಂಭಕ್ಕೆ ಗೈರಾಗಿದ್ದರು.

ಬಾಲಿವುಡ್‌ಅನ್ನು ಅಂತರರಾಷ್ಟ್ರೀಯಮಟ್ಟದಲ್ಲಿ ಗುರುತಿಸುವ ಸಲುವಾಗಿ ಐಐಎಫ್‌ಎ ಭಾರತದಿಂದ ಹೊರಗೆ ಸಮಾರಂಭವನ್ನು ಆಯೋಜಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.