ADVERTISEMENT

ಅಮೆರಿಕದಲ್ಲಿ ಅಕ್ರಮ ಔಷಧಿ ಮಾರುತ್ತಿದ್ದ 200 ವೆಬ್‌ಸೈಟ್ ಬಂದ್: ಭಾರತಕ್ಕಿದೆ ನಂಟು

ಪಿಟಿಐ
Published 5 ಫೆಬ್ರುವರಿ 2026, 13:30 IST
Last Updated 5 ಫೆಬ್ರುವರಿ 2026, 13:30 IST
<div class="paragraphs"><p>‌ಔಷಧಿ</p></div>

‌ಔಷಧಿ

   

ಚಿತ್ರ: ಗೆಟ್ಟಿ

ನ್ಯೂಯಾರ್ಕ್: ಅಮೆರಿಕದಲ್ಲಿ ಆನ್‌ಲೈನ್ ಮೂಲಕ ಅಕ್ರಮವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ 200 ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ.

ADVERTISEMENT

ವಿಶೇಷ ಎಂದರೆ ಈ ವೆಬ್‌ಸೈಟ್‌ಗಳು ಭಾರತ ಮೂಲದ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳ ಜೊತೆ ನಂಟು ಹೊಂದಿವೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಅಮೆರಿಕದಲ್ಲಿ ಆನ್‌ಲೈನ್ ಮೂಲಕ ನಕಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ದೂರುಗಳು ವ್ಯಾಪಕವಾಗಿದ್ದವು.

ಹೀಗಾಗಿ ಎಚ್ಚೆತ್ತುಕೊಂಡ ಅಮೆರಿಕದ ಕೇಂದ್ರ ಔಷದ ನಿಯಂತ್ರಕರು (US Drug Enforcement Administration–DEA) ಈ ಪೀಡಿಗಿನ ವಿರುದ್ಧ ‘Operation Meltdown‘ ಆರಂಭಿಸಿತ್ತು.

ಆಪರೇಷನ್‌ನಲ್ಲಿ ಬರೋಬ್ಬರಿ 200 ಅಕ್ರಮ ವೆಬ್‌ಸೈಟ್‌ಗಳು ಅಮೆರಿಕದಾದ್ಯಂತ ಶಿಫಾರಸು ಮಾಡಿರದ ಹಾಗೂ ನಕಲಿ ಔಷಧಗಳನ್ನು ಸಂಗ್ರಹ ಹಾಗೂ ವಿತರಣೆ ಮಾಡುತ್ತಿದ್ದವು ಎಂಬುದನ್ನು ಕಂಡುಕೊಳ್ಳಲಾಗಿದೆ. ಡಿಇಎ ಶಿಫಾರಸಿನ ಮುಖಾಂತರ ಅಲ್ಲಿನ ಸರ್ಕಾರ ವೆಬ್‌ಸೈಟ್‌ಗಳನ್ನು ಶಾಶ್ವತವಾಗಿ ಬಂದ್ ಮಾಡಿದೆ.

ಅಲ್ಲದೇ ಆಪರೇಷನ್ ಭಾಗವಾಗಿ ಇಲ್ಲಿವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಎಂಟು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಡಿಇಎ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಮೂಲದ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳ ಜೊತೆ ನಂಟು ಹೊಂದಿದ್ದ ನಕಲಿ ಆನ್‌ಲೈನ್ ಔಷಧ ಅಂಗಡಿಗಳು ಅಮೆರಿಕದ ಕಾನೂನುಗಳನ್ನು ಮೀರಿ ವ್ಯವಹಾರ ಮಾಡುತ್ತಿದ್ದವು. ಇದರಿಂದ ಸಾವಿರಾರು ಜನರ ಮೇಲೆ ಕೆಟ್ಟ ಪರಿಣಾಮವಾಗಿದೆ. ಸದ್ಯ ನಮ್ಮ ತನಿಖೆಯಲ್ಲಿ ಈ ವೆಬ್‌ಸೈಟ್‌ಗಳಿಂದ ಔಷಧ ಖರೀದಿಸಿದ ಆರು ಜನ ಗಂಭೀರ ಸಮಸ್ಯೆಗೆ (ಅಡ್ಡ ಪರಿಣಾಮ) ಹಾಗೂ 4 ಜನ ಗಂಭೀರವಲ್ಲದ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕದ ಕಾನೂನುಗಳ ಕಣ್ಣಿಗೆ ಮಣ್ಣೆರಚಿ ಔಷಧ ಮಾರಾಟ ಮಾಡುತ್ತಿದ್ದ ಈ ವೆಬ್‌ಸೈಟ್‌ಗಳು ಕಾನೂನು ಪ್ರಕಾರ ನಡೆಯುವ ವೆಬ್‌ಸೈಟ್‌ಗಳಂತೆ ಕಾಣುತ್ತಿದ್ದವು. ಆದರೆ, ನಾವು ಅವುಗಳನ್ನು ಬಯಲಿಗೆಳಿದ್ದಿದ್ದೇವೆ. ಆಪರೇಷನ್ ಮುಂದುವರೆಯುತ್ತದೆ. ಈ ವಿಚಾರದಲ್ಲಿ ಭಾರತ ಸರ್ಕಾರದ ಜೊತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಡಿಇಎ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.