ADVERTISEMENT

ಸಾಲ ಕೊಡುವುದಕ್ಕೆ ಪಾಕಿಸ್ತಾನಕ್ಕೆ 11 ಹೊಸ ಷರತ್ತು ವಿಧಿಸಿದ ಐಎಂಎಫ್

ಪಾಲಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ ಪಾಕಿಸ್ತಾನ

ಪಿಟಿಐ
Published 18 ಮೇ 2025, 15:45 IST
Last Updated 18 ಮೇ 2025, 15:45 IST
ಶೆಹಬಾಜ್‌ ಷರೀಫ್‌ 
ಶೆಹಬಾಜ್‌ ಷರೀಫ್‌    

ಇಸ್ಲಾಮಾಬಾದ್‌: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತನ್ನ ಸಾಲದ ನೆರವಿನ ಮುಂದಿನ ಕಂತನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ.

ಹೊಸ ಷರತ್ತುಗಳಲ್ಲಿ 17.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳ (ರೂಪಾಯಿ) ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಪಡೆಯುವುದು, ವಿದ್ಯುತ್ ಬಿಲ್‌ ಬಾಕಿ ಮೇಲೆ ಹೆಚ್ಚುವರಿ ಶುಲ್ಕ ಹೆಚ್ಚಿಸುವುದು ಮತ್ತು ಮೂರು ವರ್ಷಕ್ಕಿಂತ ಹಳೆಯದಾದ ಬಳಸಿದ ಕಾರುಗಳ ಆಮದು ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಸೇರಿವೆ.

ಭಾರತದ ಜೊತೆಗಿನ ಸಂಘರ್ಷ ಮುಂದುವರಿದರೆ ಅಥವಾ ಇನ್ನಷ್ಟು ತೀವ್ರಗೊಂಡರೆ, ಆರ್ಥಿಕತೆಯು ಇನ್ನಷ್ಟು ಅಪಾಯಕ್ಕೆ ಒಳಗಾಗಬಹುದು. ಸುಧಾರಣಾ ಕ್ರಮಗಳು ಹಾದಿತಪ್ಪಬಹುದು ಎಂದು ಐಎಫ್‌ ಹೇಳಿರುವುದಾಗಿ ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ. 

ADVERTISEMENT

ಪಾಕಿಸ್ತಾನಕ್ಕೆ ಈಗ ವಿಧಿಸಿರುವ 11 ಹೊಸ ಷರತ್ತುಗಳು ಸೇರಿ ಒಟ್ಟು ಷರತ್ತುಗಳ ಸಂಖ್ಯೆ 50ಕ್ಕೆ ಏರಿಕೆಯಾಗಿವೆ ಎಂದು ಪತ್ರಿಕೆಯ ವರದಿ ಹೇಳಿದೆ.  

ಐಎಂಎಫ್ ವರದಿಯು ಪಾಕಿಸ್ತಾನದ ಒಟ್ಟು ಬಜೆಟ್ ಗಾತ್ರವನ್ನು 17.6 ಲಕ್ಷ ಕೋಟಿ ರೂಪಾಯಿ ಎಂದು ತೋರಿಸಿದೆ. ಇದರಲ್ಲಿ ಅಭಿವೃದ್ಧಿ ವೆಚ್ಚಕ್ಕಾಗಿ 1.07 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಾಗೆಯೇ ಮುಂದಿನ ಹಣಕಾಸು ವರ್ಷದ ರಕ್ಷಣಾ ಬಜೆಟ್ ಅನ್ನು 2.414 ಲಕ್ಷ ಕೋಟಿ ರೂಪಾಯಿ ಎಂದು ತೋರಿಸಿದೆ. ಕಳೆದ ಬಾರಿಗೆ ಹೋಲಿಸಿದರೆ 252 ಶತಕೋಟಿ ರೂಪಾಯಿ ಅಥವಾ ಶೇ 12ರಷ್ಟು ಹೆಚ್ಚಳವಾಗಿದೆ. ಐಎಂಎಫ್‌ನ ಅಂದಾಜಿಗೆ ಹೋಲಿಸಿದರೆ, ಈ ತಿಂಗಳ ಆರಂಭದಲ್ಲಿ ಭಾರತದೊಂದಿಗಿನ ಸಂಘರ್ಷದ ನಂತರ ಪಾಕಿಸ್ತಾನ ಸರ್ಕಾರವು 2.5 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಅಥವಾ ಶೇಕಡಾ 18ರಷ್ಟು ಹೆಚ್ಚಿನ ಬಜೆಟ್ ಅನ್ನು ರಕ್ಷಣೆಗೆ ನಿಗದಿಪಡಿಸುವ ಸೂಚನೆ ನೀಡಿದೆ.

ಪ್ರಮುಖ ಷರತ್ತುಗಳು

* 2025ರ ಜೂನ್ ಅಂತ್ಯದ ವೇಳೆಗೆ ಸಾಲ ನೆರವಿನ ಯೋಜನೆಯ ಗುರಿಗಳನ್ನು ಸಾಧಿಸಲು ಐಎಂಎಫ್ ಒಪ್ಪಂದಕ್ಕೆ ಅನುಗುಣವಾಗಿ 2026ರ ಸಾಲಿನ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಪಡೆಯಬೇಕು  

* ಐಎಂಫ್‌ ಮೌಲ್ಯಮಾಪನ ಮಾನದಂಡದಂತೆಆಡಳಿತಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಬೇಕು

* 2028ರಿಂದ ಸಾಂಸ್ಥಿಕ ಮತ್ತು ನಿಯಂತ್ರಕ ವಾತಾವರಣ ರೂಪಿಸುವ ಸಲುವಾಗಿ, 2027ರಿಂದಲೇ ಅನ್ವಯವಾಗುವಂತೆ ಹಣಕಾಸು ವಲಯದ ಕಾರ್ಯತಂತ್ರ ರೂಪಿಸಲು ಯೋಜನೆ ಸಿದ್ಧಪಡಿಸಬೇಕು

* ಹೊಸ ಕೃಷಿ ಆದಾಯ ತೆರಿಗೆ ಕಾನೂನುಗಳನ್ನು ಜಾರಿಗೆ ತರುವ ನಾಲ್ಕು ಪ್ರಾಂತ್ಯಗಳ ಮೇಲೆ ಹೊಸ ಷರತ್ತುಗಳನ್ನು ವಿಧಿಸಲಾಗಿದೆ. ತೆರಿಗೆದಾರರ ಗುರುತಿಸುವಿಕೆ ಮತ್ತು ನೋಂದಣಿ, ಪ್ರಚಾರ ಅಭಿಯಾನ ಮತ್ತು ಅನುಸರಣೆಗೆ ಯೋಜನೆ ಸಿದ್ಧಪಡಿಸಬೇಕು

* ಇಂಧನ ಕ್ಷೇತ್ರದ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. 2026ರ ಫೆಬ್ರುವರಿ 15ರೊಳಗೆ ಇಂಧನ ಶುಲ್ಕಗಳನ್ನು ಪರಿಷ್ಕರಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಇದನ್ನು ಮೇ ಅಂತ್ಯದ ವೇಳೆಗೆ ಶಾಶ್ವತ ಕಾನೂನಾಗಿ ಪರಿವರ್ತಿಸಬೇಕು. ಜೂನ್‌ ವೇಳೆಗೆ ಪ್ರಸ್ತುತ ವಿದ್ಯುತ್‌ ಬಿಲ್‌ ಮೇಲಿನ ಸೇವಾ ಶುಲ್ಕವನ್ನು ಪ್ರತಿ ಯೂನಿಟ್‌ಗೆ ಇರುವ ಗರಿಷ್ಠ 3.21 ರೂಪಾಯಿ ಮಿತಿ ತೆಗೆದುಹಾಕಬೇಕು

* ವಿಶೇಷ ತಂತ್ರಜ್ಞಾನ ವಲಯಗಳು, ಇತರ ಕೈಗಾರಿಕಾ ಪಾರ್ಕ್‌ಗಳು ಮತ್ತು ಇನ್ನಿತರ ವಲಯಗಳಿಗೆ ಸಂಬಂಧಿಸಿದ ಎಲ್ಲ ಸಬ್ಸಿಡಿಗಳನ್ನು 2035ರ ವೇಳೆಗೆ ಸಂಪೂರ್ಣ ತೆಗೆದುಹಾಕಬೇಕು. ಇದಕ್ಕಾಗಿ ಈ ವರ್ಷದ ಅಂತ್ಯದೊಳಗೆ ವರದಿ ಸಿದ್ಧಪಡಿಸಬೇಕು

* ಅಂತಿಮವಾಗಿ, ಗ್ರಾಹಕ ಸ್ನೇಹಿ ಸ್ಥಿತಿಯಲ್ಲಿ, ಬಳಸಿದ ಮೋಟಾರು ವಾಹನಗಳ ವಾಣಿಜ್ಯ ಆಮದಿನ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ಅಗತ್ಯವಿರುವ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು

ಪ್ರಸ್ತುತ, ಮೂರು ವರ್ಷಗಳಷ್ಟು ಹಳೆಯ ಕಾರುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದಾಗಿದೆ. (ಜುಲೈ ಅಂತ್ಯದ ವೇಳೆಗೆ ಐದು ವರ್ಷಕ್ಕಿಂತ ಕಡಿಮೆ ಹಳೆಯ ವಾಹನಗಳನ್ನು ಮಾತ್ರ ಆಮದು ಮಾಡಿಕೊಳ್ಳಬೇಕು). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.