ADVERTISEMENT

ಪ್ರತ್ಯೇಕತಾವಾದಿ ಗಿಲಾನಿ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಎಂದ ಪಾಕ್‌ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 7:36 IST
Last Updated 2 ಸೆಪ್ಟೆಂಬರ್ 2021, 7:36 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ನಿಧನಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ.

ಗಿಲಾನಿ ಅವರನ್ನು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಿರುವ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಒಂದು ದಿನದ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, 'ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಸೈಯದ್ ಅಲಿ ಗಿಲಾನಿ ನಿಧನದ ವಾರ್ತೆ ತಿಳಿದು ಅತೀವ ದುಃಖವಾಯಿತು. ಅವರು ತಮ್ಮ ಜನರ ಹಕ್ಕಿಗಾಗಿ ಜೀವನಪರ್ಯಂತ ಹೋರಾಡಿದರು. ಭಾರತದಿಂದ ಸೆರೆವಾಸ ಮತ್ತು ಚಿತ್ರಹಿಂಸೆಯನ್ನು ಅನುಭವಿಸಿದರು. ಆದರೂ ದೃಢ ಸಂಕಲ್ಪದಿಂದ ಇದ್ದರು' ಎಂದು ಹೇಳಿದ್ದಾರೆ.

'ಅವರ ಧೈರ್ಯಶಾಲಿ ಹೋರಾಟವನ್ನು ನಾವು (ಪಾಕಿಸ್ತಾನ) ಅಭಿನಂದಿಸುತ್ತೇವೆ. ಸದಾ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತೇವೆ. 'ನಾವು ಪಾಕಿಸ್ತಾನಿಯರು ಮತ್ತು ಪಾಕಿಸ್ತಾನ ನಮ್ಮದಾಗಿದೆ', ಅವರ ನಿಧನದ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಅರ್ಧಕ್ಕೆಹಾರಿಸಿ ಅಧಿಕೃತ ಶೋಕಾಚರಣೆಯನ್ನು ಆಚರಿಸುತ್ತೇವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.