ADVERTISEMENT

ಯಾರಿಗೂ ಸಲಾಂ ಹೊಡೆಯಲ್ಲ. ನನ್ನ ದೇಶವನ್ನೂ ಆ ಸ್ಥಿತಿಗೆ ದೂಡುವುದಿಲ್ಲ: ಇಮ್ರಾನ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 11:16 IST
Last Updated 25 ಜುಲೈ 2019, 11:16 IST
   

ಇಸ್ಲಾಮಾಬಾದ್‌: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈ ಚಾಚುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ತಮ್ಮ ವಿರುದ್ಧ ಮಾಡಿರುವ ಟೀಕೆಗಳಿಗೆಪಾಕಿಸ್ತಾನಪ್ರಧಾನಿ ಇಮ್ರಾನ್‌ ಖಾನ್‌ ಅವರು ಗುರುವಾರ ಪ್ರತಿಕ್ರಿಯಿಸಿದರು.

ಮೂರುದಿನಗಳ ಕಾಲ ಅಮೆರಿಕ ಪ್ರವಾಸ ಮುಗಿಸಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ‘ನಾನು ಯಾವತ್ತೂ,ಯಾರಿಗೂ ಸಲಾಂ ಹೊಡೆಯುವುದಿಲ್ಲ. ನನ್ನ ದೇಶವನ್ನೂ ಆ ಪರಿಸ್ಥಿತಿಗೆ ದೂಡುವುದಿಲ್ಲ. ನಾವು ಸ್ವಾಭಿಮಾನಿ ದೇಶದವರು. ನನ್ನ ಹೋರಾಟಗಳೆಲ್ಲವೂ ದಾರ್ಶನಿಕ ಪ್ರೋಫೆಟ್‌(ಇಸ್ಲಾಂ ಧಾರ್ಮಿಕ ಪವಿತ್ರ ಸ್ಥಳ ಮದೀನಾ ನಿರ್ಮಾತೃ)ಅವರ ತತ್ವಗಳ ತಳಹದಿಯಲ್ಲಿನನ್ನ ದೇಶವನ್ನು ವಿಶ್ವದ ಶ್ರೇಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವುದಕ್ಕಾಗಿ’ ಎಂದು ತಿರುಗೇಟು ನೀಡಿದರು.

ಪ್ರಧಾನಿ ಖಾನ್‌ ಅವರು ಅಮೆರಿಕಾಗೆ ನೀಡಿದ ಮೊದಲ ಭೇಟಿ ವೇಳೆ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮುಜುಗರ’ ಅನುಭವಿಸಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್‌ ಪಕ್ಷದ(ಪಿಪಿಪಿ) ಮುಖ್ಯಸ್ಥ ಬಿಲಾವಾಲ್‌ ಭುಟ್ಟೋ ಜರ್ದಾರಿ ಆರೋಪಿಸಿದ್ದರು.

ADVERTISEMENT

‘ಇಮ್ರಾನ್‌ ಖಾನ್‌ ಕೇವಲ ಆಡಳಿತಗಾರ. ನಾಯಕನಲ್ಲ. ದೇಶದ ಎಲ್ಲ ಜನರ ಪರವಾಗಿ ಮಾತನಾಡುವ ನಾಯಕನನ್ನು ಪಾಕಿಸ್ತಾನ ಬಯಸುತ್ತಿದೆಯೇ ಹೊರತು, ಸ್ವಾರ್ಥಕ್ಕಾಗಿ ಮಾತನಾಡುವವನನ್ನಲ್ಲ. ವಿರೋಧ ಪಕ್ಷವು ಸರ್ಕಾರದ ವಿರುದ್ಧ ಆರೋಪ ಮಾಡುತ್ತದೆ. ಸರ್ಕಾರವೂ ಅದೇ ಕೆಲಸವನ್ನು ಮುಂದುವರಿಸಿದರೆ ಆಳುವವರು ಯಾರು?’ ಎಂದು ಪ್ರಶ್ನಿಸಿದ್ದರು.

ಖಾನ್‌ ಸರ್ಕಾರದ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತಮ್ಮ ಖಾಸಗಿ ವಿಮಾನ ಬಳಸುವ ಬದಲುಸಾಮಾನ್ಯ ವಿಮಾನದಲ್ಲಿಯೇ ಅಮೆರಿಕಾಗೆ ಪ್ರಯಾಣಿಸಿದ್ದರು. ವಾಷಿಂಗ್ಟನ್‌ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಅಮೆರಿಕ ಸರ್ಕಾರದ ಉನ್ನತಾಧಿಕಾರಿಗಳು ಆಗಮಿಸಿರಲಿಲ್ಲ. ಹೀಗಾಗಿ ಅವರು ಮುಜುಗರಕ್ಕೊಳಗಾಗಿದ್ದರು.

ಈ ಭೇಟಿ ವೇಳೆ ಖಾನ್‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಾಜ್ಯ ಕಾರ್ಯದರ್ಶಿ ಮೈಕ್‌ಪೊಂಪಿಯೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.