ADVERTISEMENT

ಪಾಕ್ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ತಿರಸ್ಕಾರ; ಚುನಾವಣೆಗೆ ಇಮ್ರಾನ್ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2022, 8:08 IST
Last Updated 3 ಏಪ್ರಿಲ್ 2022, 8:08 IST
ಪಾಕಿಸ್ತಾನದ ಸಂಸತ್ತು–ಸಂಗ್ರಹ ಚಿತ್ರ
ಪಾಕಿಸ್ತಾನದ ಸಂಸತ್ತು–ಸಂಗ್ರಹ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ವಿರೋಧ ಪಕ್ಷ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಸಂಸತ್ತಿನ ಉಪ ಸಭಾಪತಿ ತಿರಸ್ಕರಿಸಿದ್ದಾರೆ. ಅವಿಶ್ವಾಸ ಗೊತ್ತುವಳಿಯು ಅಸಾಂವಿಧಾನಿಕ, ಇದು ವಿದೇಶಿ ಶಕ್ತಿಗಳ ಪಿತೂರಿ ಎಂದು ಅಭಿಪ್ರಾಯ ಪಟ್ಟಿದ್ದು, ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ್ದಾರೆ.

ಈ ಮೂಲಕ ಇಮ್ರಾನ್‌ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಆಡಳಿತಾರೂಢ ಪಕ್ಷದ ಮುಖಂಡರು ಅವಿಶ್ವಾಸ ಗೊತ್ತುವಳಿಯನ್ನು ವಿದೇಶಿ ಶಕ್ತಿಗಳ ಪಿತೂರಿಗಳ ಭಾಗ ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ಸಂಸತ್ತಿನ ಪ್ರತಿಭಟನೆ ನಡೆಸಿವೆ.

ಇದರ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಇಮ್ರಾನ್ ಖಾನ್, 'ಶಾಸನ ಸಭೆಗಳನ್ನು ವಿಸರ್ಜಿಸುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದೇನೆ. ಪ್ರಜಾಪ್ರಭುತ್ವದ ರೀತಿ ಚುನಾವಣೆ ನಡೆಯಬೇಕು. ಪಾಕಿಸ್ತಾನದ ಜನರು ಚುನಾವಣೆಗೆ ಅಣಿಯಾಗುವಂತೆ ಕೋರುತ್ತೇನೆ' ಎಂದಿದ್ದಾರೆ.

ADVERTISEMENT

'ಸ್ಪೀಕರ್ ಅವರ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಪಾಕಿಸ್ತಾನ ಪ್ರಜೆಯನ್ನು ಅಭಿನಂದಿಸುತ್ತೇನೆ. ಅವಿಶ್ವಾಸ ಗೊತ್ತುವಳಿಯು ನಮ್ಮ ವಿರುದ್ಧ ವಿದೇಶಿ ಶಕ್ತಿಗಳು ನಡೆಸಿರುವ ಪಿತೂರಿಯಾಗಿದೆ. ಪಾಕಿಸ್ತಾನದಲ್ಲಿ ಯಾರು ಆಡಳಿತ ನಡೆಸಬೇಕು ಎಂಬುದನ್ನು ಪಾಕಿಸ್ತಾನವೇ ನಿರ್ಧರಿಸಬೇಕು' ಎಂದು ಇಮ್ರಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.