ADVERTISEMENT

ಗುಂಡಿನ ದಾಳಿ ನಡೆದ ಸ್ಥಳದಿಂದಲೇ ಇಮ್ರಾನ್ ರ‍್ಯಾಲಿ ನಾಳೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 14:10 IST
Last Updated 6 ನವೆಂಬರ್ 2022, 14:10 IST
ಇಮ್ರಾನ್ ಖಾನ್‌ 
ಇಮ್ರಾನ್ ಖಾನ್‌    

ಇಸ್ಲಾಮಾಬಾದ್‌: ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆ ರ‍್ಯಾಲಿಯನ್ನು ನನ್ನ ಮೇಲೆ ಗುಂಡಿನದಾಳಿ ನಡೆದ ಸ್ಥಳದಿಂದಲೇ ಮಂಗಳವಾರ ಮತ್ತೆ ಆರಂಭಿಸುವುದಾಗಿ ಮಾಜಿ ಪ್ರಧಾನಿ ಹಾಗೂ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ತಿಳಿಸಿದ್ದಾರೆ.

‘ಮುಂದಿನ 10–14 ದಿನಗಳ ಕಾಲ ನನ್ನ ಅನುಪಸ್ಥಿತಿಯಲ್ಲಿ ರ‍್ಯಾಲಿ ನಡೆಯಲಿದೆ. ರ‍್ಯಾಲಿ ರಾವಲ್ಪಿಂಡಿ ತಲುಪಿದ ಬಳಿ ಅದರ ನೇತೃತ್ವವನ್ನು ನಾನೇ ವಹಿಸಿಕೊಳ್ಳಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಮ್ರಾನ್‌ ಖಾನ್‌ ಇನ್ನು 2–3 ದಿನಗಳಲ್ಲಿಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.ಹತ್ಯೆ ಯತ್ನ ಖಂಡಿಸಿ ಪಕ್ಷವು ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಲಿದೆ ಎಂದು ಪಿಟಿಐ ಪಕ್ಷದ ನಾಯಕ ಹಮ್ಮದ್‌ ಅಜರ್‌ ಭಾನುವಾರ ತಿಳಿಸಿದ್ದಾರೆ.

ADVERTISEMENT

ಕಳೆದ ಗುರುವಾರ ಪಂಜಾಬ್‌ ಪ್ರಾಂತ್ಯದ ವಜೀರಾಬಾದ್ ಪ್ರದೇಶದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಳಿಕೋರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಮ್ರಾನ್ ಅವರ ಬಲಗಾಲಿಗೆ ಗುಂಡು ತಗುಲಿತ್ತು.

ತನಿಖೆಗೆ ಒತ್ತಾಯ: ‘2011ರಲ್ಲಿ ಪಂಜಾಬ್‌ ಮಾಜಿ ಗವರ್ನರ್‌ ಸಲ್ಮಾನ್‌ ತಸೀರ್ ಅವರನ್ನು ಹತ್ಯೆ ಮಾಡಿದ ಮಾದರಿಯಲ್ಲೇ ನನ್ನ ಹತ್ಯೆಯನ್ನೂ ನಡೆಸಲು ಪ್ರಧಾನಿ ಶಹಬಾಝ್‌ ಷರೀಫ್‌, ಆಂತರಿಕ ಸಚಿವ ರಾಣಾ ಸನಾವುಲ್ಲಾ ಮತ್ತು ಮೇಜರ್ ಜನರಲ್‌ ಫೈಸಲ್‌ ನಸೀರ್‌ ಅವರು ಯೋಜನೆ ರೂಪಿಸಿದ್ದಾರೆ ಎಂದು ಇಮ್ರಾನ್ ಆರೋಪಿಸಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಪ್ರಧಾನಿ ಶಹಬಾಝ್‌ ಷರೀಫ್‌, ನ್ಯಾಯಾಂಗ ಆಯೋಗವನ್ನು ರಚಿಸಿ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್‌ ಅವರನ್ನುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.