ADVERTISEMENT

ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗದಿದ್ದರೆ ಪಾಕಿಸ್ತಾನದಲ್ಲಿ ದಂಗೆ: ಇಮ್ರಾನ್‌ ಖಾನ್

ಪಿಟಿಐ
Published 2 ಜೂನ್ 2022, 13:31 IST
Last Updated 2 ಜೂನ್ 2022, 13:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ‘ಪಾಕಿಸ್ತಾನದಲ್ಲಿ ಶೀಘ್ರದಲ್ಲೇ ಹೊಸ ಚುನಾವಣೆಗಳು ಘೋಷಣೆಯಾಗದಿದ್ದರೆ ಜನರು ದಂಗೆ ಎದ್ದು ಅಂತರ್ಯುದ್ಧ ನಡೆಯಲಿದೆ’ ಎಂದು ಪಾಕ್‌ನ ಮಾಜಿ ಪ್ರಧಾನಿ, ತೆಹ್ರಿಕ್‌–ಎ–ಇನ್ಸಾಫ್‌ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್ ಘೋಷಿಸಿದ್ದಾರೆ.

ತಮ್ಮ ಸರ್ಕಾರದ ನಂತರ, ಅಧಿಕಾರಕ್ಕೆ ಬಂದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ನೇತೃತ್ವದ ಸರ್ಕಾರವನ್ನು ಆಮದು ಮಾಡಿಕೊಳ್ಳಲಾಗಿದೆ. ಪಿಎಂಎಲ್‌–ಎನ್‌ ಜನರನ್ನು ಪ್ರತಿನಿಧಿಸುವ ನಿಜವಾದ ಸರ್ಕಾರ ಅಲ್ಲ. ಹಾಗಾಗಿ ಶೀಘ್ರದಲ್ಲೇ ಮರುಚುನಾವಣೆ ನಡೆಸಬೇಕು ಎಂದು ಇಮ್ರಾನ್‌ ಒತ್ತಾಯಿಸುತ್ತಿದ್ದಾರೆ.

ಬುಧವಾರ ಬೋಲ್‌ ನ್ಯೂಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಮ್ರಾನ್‌, ‘ಕಾನೂನು ಹಾಗೂ ಸಂವಿಧಾನಾತ್ಮಕವಾಗಿ ಹೊಸ ಚುನಾವಣೆಗಳಿಗೆ ಅವಕಾಶ ನೀಡಿದರೆ ಸರಿ. ಇಲ್ಲದಿದ್ದರೆ ಈ ದೇಶ ಅಂತರ್ಯುದ್ಧವನ್ನು ನೋಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಇಮ್ರಾನ್‌ಗೆ ಎಚ್ಚರಿಕೆ ನೀಡಿದ ಪ್ರಧಾನಿ ಶೆಹಬಾಝ್‌:ಇಮ್ರಾನ್‌ ಅವರು, ಬೋಲ್‌ ನ್ಯೂಸ್‌ ಸಂದರ್ಶನದಲ್ಲಿ, ‘ಪಾಕಿಸ್ತಾನವು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ, ಮೂರು ತುಂಡುಗಳಾಗಿ ವಿಭಜನೆಯಾಗುತ್ತದೆ’ ಎಂದು ನೀಡಿದ್ದ ಹೇಳಿಕೆಗೆ, ಪಾಕಿಸ್ತಾನದ ಪ್ರಧಾನಿ ಶೆಹಬಾಝ್‌, ‘ನೀವು ನಿಮ್ಮ ರಾಜಕೀಯವನ್ನು ಮಾಡಿ. ಪಾಕಿಸ್ತಾನದ ವಿಭಜನೆಯ ಬಗ್ಗೆ ಮಾತನಾಡುವ ಧೈರ್ಯ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಟರ್ಕಿಯ ಅಧಿಕೃತ ಪ್ರವಾಸದಲ್ಲಿರುವ ಶೆಹಬಾಝ್‌, ‘ನಾನು ಟರ್ಕಿಯಲ್ಲಿ ಒಪ್ಪಂದಗಳಿಗೆ ಸಹಿ ಹಾಕುತ್ತಿರುವಾಗ, ಇಮ್ರಾನ್ ದೇಶದ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇಮ್ರಾನ್‌ ಸಾರ್ವಜನಿಕ ಸೇವೆಗೆ ಅನರ್ಹರು ಎಂಬುದಕ್ಕೆ ಅವರ ಇತ್ತೀಚಿನ ಸಂದರ್ಶನವೇ ಸಾಕ್ಷಿ. ನೀವು ನಿಮ್ಮಮಿತಿಗಳನ್ನು ದಾಟುವ ಧೈರ್ಯ ಮಾಡಬೇಡಿ’ ಎಂದು ಟ್ರೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.