ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ
ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್: ಲಾಸ್ ಏಂಜಲೀಸ್ ನಗರದ ಪೆಸಿಫಿಕ್ ಪ್ಯಾಲಿಸೈಡ್ಸ್ ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚಿನ ಬೆಂಕಿಯಲ್ಲಿ ಐವರು ಸಜೀವ ದಹನವಾಗಿದ್ದಾರೆ.
ಬೆಂಕಿ ನಂದಿಸಲು ಸ್ಥಳೀಯ ಅಗ್ನಿಶಾಮಕ ದಳದೊಂದಿಗೆ ಪುರಸಭೆಯೂ ಕೈಜೋಡಿಸಿದೆ. ಆದರೆ ನೀರಿನ ಕೊರತೆ ಎದುರಾಗುತ್ತಿದ್ದು, ಬೆಂಕಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ನಗರಗಳಲ್ಲಿರುವ ನೀರಿನ ಟ್ಯಾಂಕ್‌ಗಳು ಸ್ಥಳೀಯವಾಗಿ ಸಂಭವಿಸುವ ಸಣ್ಣಪುಟ್ಟ ಅಗ್ನಿ ಅವಘಡಗಳನ್ನು ನಿಯಂತ್ರಣ ಮಾಡಬಲ್ಲವೇ ಹೊರತು ಅನಿಯಂತ್ರಿತವಾಗಿ ಹರಡುವ ಕಾಳ್ಗಿಚ್ಚುಗಳನ್ನಲ್ಲ ಎಂದು ಅಧಿಕಾರಿಗಳು ಅಸಹಾಯಕರಾಗಿ ಹೇಳಿದ್ದಾರೆ.
ಮಂಗಳವಾರ ರಾತ್ರಿಯಿಂದ ಹಬ್ಬಲಾರಂಭಿಸಿದ ಕಾಳ್ಗಿಚ್ಚು ಬುಧವಾರ ಹಾಲಿವುಡ್ ಸೆಲೆಬ್ರಿಟಿಗಳು ವಾಸಿಸುವ ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶವು ಆವರಿಸಿತ್ತು. ಈವರೆಗೆ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 12 ಸಾವಿರ ಎಕರೆಯಷ್ಟು ಜಾಗವನ್ನು ಬೆಂಕಿ ಆವರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಕಾಳ್ಗಿಚ್ಚಿನ ಬಗ್ಗೆ ಎಚ್ಚರಿಕೆ ಇದ್ದ ಕಾರಣ ಮುಂಚಿತವಾಗಿ 1 ಮಿಲಿಯನ್ ಗ್ಯಾಲನ್‌ನ (3.8 ಮಿಲಿಯನ್ ಲೀಟರ್‌ನ) ಮೂರು ನೀರಿನ ಟ್ಯಾಂಕ್‌ಗಳನ್ನು ತುಂಬಿಸಿಡಲಾಗಿತ್ತು. ಆದರೆ ಈ ಸಂಗ್ರಹವೂ ಖಾಲಿಯಾಗುತ್ತಿದೆ. ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶಕ್ಕೆ ಸಾಮಾನ್ಯವಾಗಿ ಪೂರೈಸುವ ಮೂರು ಪಟ್ಟು ಹೆಚ್ಚು ನೀರನ್ನು ಬೆಂಕಿ ನಿಯಂತ್ರಿಸಲು ಬಳಸಲಾಗುತ್ತಿದೆ. ಮಂಗಳವಾರದಿಂದ 2 ಸಾವಿರದಿಂದ 4 ಸಾವಿರ ಗ್ಯಾಲನ್ ನೀರಿನ ಪ್ರಮಾಣದ 18 ನೀರಿನ ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ನೀರಿನ ಕೊರತೆ ಎದುರಾಗಿದೆ’ ಎಂದು ಲಾಸ್ ಏಂಜಲೀಸ್‌ನ ಜಲ ವಿಭಾಗ ಹೇಳಿರುವುದಾಗಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.